ಮಂಗಳೂರು ಗುಂಪುಹತ್ಯೆ ಪ್ರಕರಣ : ಆರೋಪಿಗಳಿಗೆ ಜಾಮೀನು ಪ್ರಶ್ನಿಸಿದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು : ಮಂಗಳೂರು ಗುಂಪು ಹತ್ಯೆ ಪ್ರಕರಣದಲ್ಲಿನ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ಮೃತ ಅಶ್ರಫ್ ಸಹೋದರ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ.
ಇದೇ ವೇಳೆ, ವಿಚಾರಣಾ ನ್ಯಾಯಾಲಯವು ಅಶ್ರಫ್ ಸಹೋದರನಿಗೆ ಸಕಾಲಕ್ಕೆ ನೋಟಿಸ್ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡದೇ ಗಂಭೀರ ಲೋಪ ಎಸಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಕರಣದಲ್ಲಿನ ನಾಲ್ಕು ಮತ್ತು 11ನೇ ಆರೋಪಿಗೆ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿರುವುದನ್ನು ಗಮನಿಸಿರುವ ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಹಂತದಲ್ಲಿ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿ, ಅವುಗಳನ್ನು ಪರಿಗಣಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸುವುದರಿಂದ ಪ್ರಕರಣದ ವಿಚಾರಣೆ ವಿಳಂಬವಾಗುತ್ತದೆ. ಜತೆಗೆ, ಗುಂಪು ಹತ್ಯೆ ಪ್ರಕರಣಗಳನ್ನು ನಿಗದಿತ ಕಾಲಮಿತಿಯಲ್ಲಿ ಇತ್ಯರ್ಥಪಡಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ ಎಂದು ಆದೇಶದಲ್ಲಿ ದಾಖಲಿಸಿದೆ.
ಯೋಜನೆ ರೂಪಿಸಲು ನಿರ್ದೇಶನ:
ಗುಂಪು ಹಲ್ಲೆ ಮತ್ತು ಹತ್ಯೆಯಲ್ಲಿ ಸಾವನ್ನಪ್ಪಿದವರ ಕುಟುಂಬದವರಿಗೆ ಮಧ್ಯಂತರ ಪರಿಹಾರದ ನೀಡುವ ಸಂಬಂಧ ಮೂರು ತಿಂಗಳಲ್ಲಿ ಯೋಜನೆ ರೂಪಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿರುವ ನ್ಯಾಯಪೀಠ, ಈ ಸಂಬಂಧ ಅನುಪಾಲನಾ ವರದಿ ಸಲ್ಲಿಸಲು ಆದೇಶಿಸಿದೆ. ಗುಂಪು ಹಲ್ಲೆ ಮತ್ತ ಹತ್ಯೆ ತಡೆಯಲು ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳ ನೇಮಕಾತಿ, ಸೂಕ್ಷ್ಮ ಪ್ರದೇಶಗಳನ್ನು ಗುರುತಿಸುವುದು, ನಿಯಮತಿ ಪೊಲೀಸ್ ಗಸ್ತು, ತಕ್ಷಣಕ್ಕೆ ಎಫ್‌ಐಆರ್ ದಾಖಲಿಸುವುದನ್ನು ಕಟ್ಟುನಿಟ್ಟುಗೊಳಿಸಲು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.
ಇಂಥ ಪ್ರಕರಣಗಳನ್ನು ಇತ್ಯರ್ಥಪಡಿಸಲು ನಿಗದಿತ ನ್ಯಾಯಾಲಯಗಳನ್ನು ಆರಂಭಿಸಬೇಕು, ಸಂಜ್ಞೇ (ಕಾಗ್ನೈಜೆನ್ಸ್) ಪರಿಗಣಿಸಿದ ಆರು ತಿಂಗಳಲ್ಲಿ ಪ್ರಕರಣ ಇತ್ಯರ್ಥವಾಗಬೇಕು. ಆರೋಪಿಗಳು ಆರೋಪ ಮುಕ್ತಿ ಕೋರುವಾಗ, ಜಾಮೀನು ಕೋರುವಾಗ ಮತ್ತು ಪರೋಲ್ ಕೇಳುವಾಗ ಅದನ್ನು ವಿರೋಧಿಸಿಲು ಸಂತ್ರಸ್ತ ವ್ಯಕ್ತಿಯ ಕುಟುಂಬದವರಿಗೆ ನೋಟಿಸ್ ಜಾರಿ ಮಾಡಬೇಕು ಎಂದು ನಿರ್ದೇಶಿಸಿರುವ ನ್ಯಾಯಪೀಠ, ಇಂಥ ಕೃತ್ಯಗಳನ್ನು ತಡೆಯಲು, ಹತ್ತಿಕ್ಕಲು ವಿಫಲವಾಗುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಈ ಆದೇಶವನ್ನು ಪಾಲಿಸಲು ಆದೇಶದ ಪ್ರತಿಯನ್ನು ಎಲ್ಲ ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯಗಳಿಗೆ ಕಳುಹಿಸಿಕೊಡಬೇಕು ಮತ್ತು ಸಂತ್ರಸ್ತರನ್ನು ಪ್ರಕರಣದಲ್ಲಿ ಪಕ್ಷಕಾರರನ್ನಾಗಿಸಬೇಕು ಎಂದು ನಿರ್ದೇಶಿಸಿದೆ.






