ಎಇಇ ವೇತನ ಹೆಚ್ಚಳಕ್ಕೆ ಕೋರಿದ ಅರ್ಜಿ; ಕೆಪಿಟಿಸಿಎಲ್‌ಗೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ (ಕೆಪಿಟಿಸಿಎಲ್) ಸಹಾಯಕ ಕಾರ್ಯಕಾರಿ ಇಂಜಿನಿಯರ್ (ಎಲೆಕ್ಟ್ರಿಕಲ್) ಆಗಿ ಸೇವೆ ಸಲ್ಲಿಸುತ್ತಿರುವವರ ವೇತನ ಹೆಚ್ಚಳ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಕೆಪಿಟಿಸಿಎಲ್‌ಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಬೆಸ್ಕಾಂ ಬೆಂಗಳೂರು ಕಾರ್ಪೋರೇಟ್ ಕಚೇರಿಯಲ್ಲಿ ಎಇಇ (ಎಲೆಕ್ಟ್ರಿಕಲ್) ಆಗಿ ಸೇವೆ ಸಲ್ಲಿಸುತ್ತಿರುವ ಎಸ್. ಪ್ರಕಾಶ್ ಕುಮಾರ್ ಸೇರಿ ರಾಜ್ಯದ ವಿವಿಧ ಕಡೆ ಸೇವೆ ಸಲ್ಲಿಸುತ್ತಿರುವ 157 ಮಂದಿ ಎಇಇಗಳು ಸಲ್ಲಿಸಿರುವ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಕೆಪಿಟಿಸಿಎಲ್‌ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಕೆಪಿಟಿಸಿಎಲ್ ಮಂಡಳಿಯ 2008ರ ಜೂನ್ 2ರ ನಿರ್ಧಾರದಂತೆ 2003ರ ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಮೂಲ ವೇತನಕ್ಕೆ ಹೆಚ್ಚುವರಿಯಾಗಿ ಶೇ.2 ವೇತನವನ್ನು ಏರಿಕೆ ಮಾಡಿ ವೇತನ ಮರು ನಿಗದಿಪಡಿಸಬೇಕು. ಅದಕ್ಕೆ ತಕ್ಕಂತೆ ಹಿಂಬಾಕಿ ಹಾಗೂ ಇತರ ಭತ್ಯೆಗಳನ್ನು ಮಂಜೂರು ಮಾಡುವಂತೆ ನಿರ್ದೇಶನ ನೀಡಬೇಕು ಅರ್ಜಿದಾರರು ಕೋರಿದ್ದಾರೆ.




