ನಿಧಿ ದುರ್ಬಳಕೆ ಆರೋಪ: ಬ್ರಹ್ಮಾವರ ದೇವಾಲಯದ ಸಿಬ್ಬಂದಿ ವಜಾ ಆದೇಶ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು : ನಕಲಿ ರಸೀದಿಗಳನ್ನು ನೀಡಿ ದೇವಾಲಯದ ನಿಧಿಯನ್ನು ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪ್ರಸಿದ್ಧ ದುರ್ಗಾಪರಮೇಶ್ವರಿ ದೇವಾಲಯದ ಸಿಬ್ಬಂದಿಯೊಬ್ಬರನ್ನು ವಜಾಗೊಳಿಸಿದ್ದ ಧಾರ್ಮಿಕ ದತ್ತಿ ಇಲಾಖೆಯ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ದೇವಾಲಯದ ದ್ವಿತೀಯ ದರ್ಜೆ ಸಹಾಯಕರಾಗಿದ್ದ ರಾಜೇಶ್ ನಾಯಕ್ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ಮಾಡಿದೆ.
ದೇವಾಲಯಕ್ಕೆ ಬರುವ ಭಕ್ತರ ಹಣವನ್ನು ದುರುಪಯೋಗಪಡಿಸಿಕೊಳ್ಳುವುದು ದೇವರಿಗೆ ಎಸಗುವ ವಂಚನೆಯಾಗಿದೆ. ನಂಬಿಕೆಯ ಹುದ್ದೆಯಲ್ಲಿದ್ದು ಭ್ರಷ್ಟಾಚಾರ ಎಸಗಿದಾಗ ವಜಾ ಶಿಕ್ಷೆ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ದುಷ್ಕೃತ್ಯದ ಗಂಭೀರತೆ ನಂಬಿಕೆಯ ಉಲ್ಲಂಘನೆ ಯಲ್ಲಿದೆಯೇ ಹೊರತು ರೂಪಾಯಿ ಮೌಲ್ಯದಲ್ಲಿ ಅಲ್ಲ. ಸಣ್ಣ ಮೊತ್ತವೂ ಅಪ್ರಾಮಾಣಿಕತೆಯನ್ನು ಸಣ್ಣ ವಿಷಯವನ್ನಾಗಿಸುವುದಿಲ್ಲ ಎಂದು ಹೇಳಿದೆ.
ಪ್ರಕರಣದ ವಿಚಾರಣೆ ವೇಳೆ ದೇವಾಲಯಗಳಲ್ಲಿ ನಡೆಯುವ ಆರ್ಥಿಕ ಅಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ರಾಜ್ಯದ ಮುಜರಾಯಿ ದೇವಾಲಯಗಳ ಆದಾಯ ಸೋರಿಕೆ ತಡೆಯಲು ಮತ್ತು ಪಾರದರ್ಶಕತೆ ತರಲು ಡಿಜಿಟಲ್ ಲೆಕ್ಕಪತ್ರ ವ್ಯವಸ್ಥೆ ಜಾರಿಗೆ ತರುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ಜತೆಗೆ, ಭವಿಷ್ಯದಲ್ಲಿ ಇಂತಹ ಅಕ್ರಮಗಳು ನಡೆಯದಂತೆ ತಡೆಯಲು ಇ-ಆಡಳಿತ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆಗೆ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಪ್ರಕರಣವೇನು?: ಅರ್ಜಿದಾರ ರಾಜೇಶ್ ನಾಯಕ್ ವಿರುದ್ಧ 2018ರ ಆಗಸ್ಟ್ 23ರಿಂದ 25ರ ಅವಧಿಯಲ್ಲಿ ಐಟಿ ಅಡ್ಮಿನ್ ಅವರ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ದುರ್ಬಳಕೆ ಮಾಡಿಕೊಂಡಿದ್ದ ಆರೋಪವಿದೆ. ದೇವಾಲಯದಲ್ಲಿನ ದೇವರ ಸರ್ವಾಲಂಕಾರ ಪೂಜೆ ಹಾಗೂ ಹೂವಿನ ಪೂಜೆಗೆ ಬಂದ ಭಕ್ತರಿಗೆ ನಕಲಿ ರಸೀದಿಗಳನ್ನು ನೀಡಿದ್ದರು. ಸಂಗ್ರಹವಾದ ಹಣವನ್ನು ದೇವಾಲಯದ ಖಾತೆಗೆ ಜಮಾ ಮಾಡದೆ ದುರುಪಯೋಗಪಡಿಸಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಈ ಸಂಬಂಧ ತನಿಖೆ ನಡೆಸಿದ್ದ ಉಪವಿಭಾಗಾಧಿಕಾರಿಗಳು (ಎಸಿ) ವರದಿ ನೀಡಿದ ಬಳಿಕ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯು ರಾಜೇಶ್ ನಾಯಕ್ ಅವರನ್ನು ಸೇವೆಯಿಂದ ವಜಾಗೊಳಿಸಿದ್ದರು. ಇದನ್ನು ಪ್ರಶ್ನಿಸಿ ರಾಜೇಶ್ ನಾಯಕ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ಮಾರ್ಗಸೂಚಿಗಳು
► ರಾಜ್ಯದ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ಪೂಜೆ, ಸೇವಾ ಟಿಕೆಟ್, ಕಾಣಿಕೆ, ಹುಂಡಿ, ವಸತಿ ನಿಲಯ ಹಾಗೂ ಇತರ ಆದಾಯ ಸಂಗ್ರಹ ಮತ್ತು ವೆಚ್ಚಗಳನ್ನು ನೈಜ-ಸಮಯದಲ್ಲಿ ನಮೂದಿಸುವ ಹಾಗೂ ಪರಿಶೀಲನೆಗೊಳಪಡಿಸುವ ಕೇಂದ್ರೀಕೃತ ತಂತ್ರಾಂಶ ರೂಪಿಸಬೇಕು.
► ಪ್ರತಿಯೊಂದು ರಸೀದಿಗೂ ಯಂತ್ರಚಾಲಿತ ವಿಶಿಷ್ಟ ಸರಣಿ ಸಂಖ್ಯೆ ಇರಬೇಕು. ರಸೀದಿಯ ಸತ್ಯಾಸತ್ಯತೆಯನ್ನು ಭಕ್ತರು ತಕ್ಷಣವೇ ತಮ್ಮ ಮೊಬೈಲ್ ಮೂಲಕ ಪರಿಶೀಲಿಸಲು ಕ್ಯೂಆರ್ ಕೋಡ್ ವ್ಯವಸ್ಥೆ ಇರಬೇಕು.
► ಒಂದೇ ಸರಣಿ ಸಂಖ್ಯೆಯ ರಸೀದಿಯನ್ನು ಎರಡನೇ ಬಾರಿ ಮುದ್ರಿಸಲು ವ್ಯವಸ್ಥೆಯಲ್ಲಿ ಅವಕಾಶವಿರಬಾರದು. ಅನಿವಾರ್ಯ ಸಂದರ್ಭಗಳಲ್ಲಿ ಹಿರಿಯ ಅಧಿಕಾರಿಯ ಅನುಮೋದನೆ ಪಡೆದು ರಸೀದಿಯ ಎರಡನೇ ಬಾರಿ ಮುದ್ರಿಸಲು ಅವಕಾಶ ನೀಡಬೇಕು.
► ಯುಪಿಐ, ಕ್ಯೂಆರ್ ಕೋಡ್, ಡೆಬಿಟ್, ಕ್ರೆಡಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿ ಮಾಡುವುದನ್ನು ಉತ್ತೇಜಿಸುವ ಮೂಲಕ ನಗದು ನಿರ್ವಹಣೆಯನ್ನು ಮಿತಿಗೊಳಿಸಬೇಕು.
► ಹುಂಡಿ ಎಣಿಕೆ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮರಾ ಕಡ್ಡಾಯವಾಗಿ ಅಳವಡಿಸಿರಬೇಕು. ಎಣಿಕೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ’ಬಾಡಿ ಕ್ಯಾಮರಾ’ ಧರಿಸುವುದನ್ನು ಕಡ್ಡಾಯಗೊಳಿಸಬೇಕು.
► ದೇವಾಲಯದ ಚಿನ್ನಾಭರಣ, ಬೆಳ್ಳಿ ಮತ್ತು ಅಮೂಲ್ಯ ವಸ್ತುಗಳ ತೂಕ, ವಿವರ ಹಾಗೂ ಉನ್ನತ ಗುಣಮಟ್ಟದ ಫೋಟೋಗಳನ್ನೊಳಗೊಂಡ ಡಿಜಿಟಲ್ ದಾಸ್ತಾನು ವ್ಯವಸ್ಥೆ ಜಾರಿ ಮಾಡಬೇಕು.
► ಈ ಎಲ್ಲ ಮಾರ್ಗಸೂಚಿಗಳನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ರಾಜ್ಯದ ಎಲ್ಲ ದೇವಾಲಯಗಳಿಗೂ ಅನ್ವಯಿಸಲಿದ್ದು, ಸಾರ್ವಜನಿಕ ಆಸ್ತಿ ಮತ್ತು ಭಕ್ತರ ಕಾಣಿಕೆಯನ್ನು ರಕ್ಷಿಸಲು ಈ ಕ್ರಮ ಅಗತ್ಯ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.






