ನ್ಯಾಯಬದ್ಧ ವೇತನ ಪಡೆಯುವುದು ಕಾರ್ಮಿಕರ ಹಕ್ಕು : ಹೈಕೋರ್ಟ್

ಬೆಂಗಳೂರು : ನ್ಯಾಯಬದ್ಧ ವೇತನ ಪಡೆಯುವುದು ಕಾರ್ಮಿಕರ ಹಕ್ಕು. ವೇತನ ಹೆಚ್ಚಳ ಉದ್ಯೋಗದಾತರ ಪಾಲಿಗೆ ಜೀವನ್ಮರಣದ ವಿಷಯವಾಗುವುದಾದರೆ, ಕಾರ್ಮಿಕರಿಗೂ ಅದು ಜೀವನ್ಮರಣ ವಿಷಯ ಆಗುವುದಿಲ್ಲವೇ ಎಂದು ಹೈಕೋರ್ಟ್ ಪ್ರಶ್ನಿಸಿದೆ.
ಗಾರ್ಮೆಂಟ್ಸ್ ಆ್ಯಂಡ್ ಟೆಕ್ಸ್‌ಟೈಲ್ ವರ್ಕರ್ಸ್ ಯೂನಿಯನ್ 2023ರಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ಗಾರ್ಮೆಂಟ್ಸ್ ನೌಕರ ಕನಿಷ್ಟ ವೇತನ ಹೆಚ್ಚಳ ವಿಚಾರದಲ್ಲಿ 2019ರ ಅಧಿಸೂಚನೆ ಪರಿಗಣಿಸುವಂತೆ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ 2026ರ ಜೂನ್ 3ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಕರ್ನಾಟಕ ಟೆಕ್ಸ್ ಟೈಲ್ ಮಿಲ್ಸ್ ಅಸೋಸಿಯೇಷನ್ ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಎಚ್. ಶಾಂತಿಭೂಷಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಮೇಲ್ಮನವಿದಾರರ ಪರ ವಕೀಲರು ವಾದ ಮಂಡಿಸಿ, ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಟೆಕ್ಸ್‌ಟೈಲ್ ಉದ್ದಿಮೆದಾರರು ಇದ್ದಾರೆ. ಏಕಸದಸ್ಯ ನ್ಯಾಯಪೀಠದ ಆದೇಶ ಪಾಲನೆ ಅವರ ಪಾಲಿಗೆ ಕಷ್ಟವಾಗಲಿದೆ. ಇದು ಉದ್ದಿಮೆದಾರರ ಜೀವನ್ಮರಣದ ಪ್ರಶ್ನೆಯಾಗಿದೆ ಎಂದರು.
ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಪೀಠ, ಉದ್ದಿಮೆದಾರರಿಗೆ ಜೀವನ್ಮರಣದ ವಿಷಯ ಎಂದಾದರೆ, ಕಾರ್ಮಿಕರಿಗೂ ಜೀವನ್ಮಣರ ವಿಷಯವಾಗುವುದಿಲ್ಲವೇ? ಕಾರ್ಮಿಕರ ಘನತೆ ನೋಡಬೇಕಾಗಿದೆ. ನ್ಯಾಯಬದ್ಧ ವೇತನ ಪಡೆಯುವುದು ಕಾರ್ಮಿಕರ ಹಕ್ಕು ಎಂದು ಹೇಳಿತು. ಅರ್ಜಿ ಕುರಿತ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಆದೇಶವನ್ನು ಕಾಯ್ದಿರಿಸಿತು.






