ಶಾಸಕ ರಮೇಶ್ ಬಂಡಿಸಿದ್ದೇಗೌಡರಿಗೆ ಹೈಕೋರ್ಟ್‌ನಿಂದ ತುರ್ತು ನೊಟೀಸ್

ಬೆಂಗಳೂರು : ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡರಿಗೆ ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿ ಮತ್ತು ಆರ್ಥಿಕ ಹೊಣೆಗಾರಿಕೆ ಮುಚ್ಚಿಟ್ಟ ಆರೋಪದಡಿ ಹೈಕೋರ್ಟ್ ತುರ್ತು ನೊಟೀಸ್ ಜಾರಿ ಮಾಡಿದೆ. 2023ರ ವಿಧಾನಸಭಾ ಚುನಾವಣೆಯ ಪ್ರಮಾಣಪತ್ರ ಪ್ರಶ್ನಿಸಿ ಮೈಸೂರಿನ ನಿವಾಸಿ ಎಂ.ಡಿ.ಆದಿಶ್ ಸಾಗರ್ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಇಂದು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಅವರಿದ್ದ ಏಕಸದಸ್ಯ ಪೀಠ ನಡೆಸಿತು. ಅರ್ಜಿದಾರರ ಪರ ವಕೀಲರು, ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಅವರು ಮೈಸೂರು ತಾಲೂಕಿನ ಬೋಗಾದಿ ಗ್ರಾಮದ ಎರಡು ಜಮೀನುಗಳ ಮಾಲೀಕತ್ವ ಮುಚ್ಚಿಟ್ಟಿದ್ದಾರೆ. ಸರ್ವೇ ನಂಬರ್ 78/4 ಮತ್ತು 78/5ರ ಜಮೀನುಗಳ ಮಾಹಿತಿ ಅಫಿಡವಿಟ್‌ನಲ್ಲಿ ಬಹಿರಂಗಪಡಿಸಿಲ್ಲ ಎಂದುಆರೋಪ ಮಾಡಿದರು. ಅಲ್ಲದೆ ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 125A ಅಡಿ ಚುನಾವಣಾ ಪ್ರಾಧಿಕಾರಗಳು ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ಆರೋಪ ಮಾಡಿದರು
ವಾದ ಆಲಿಸಿದ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಪೀಠ ಕರ್ನಾಟಕ ಚುನಾವಣಾ ಆಯೋಗ ಹಾಗೂ ರಮೇಶ್ ಬಂಡಿಸಿದ್ದೇಗೌಡರಿಗೆ ತುರ್ತು ನೋಟಿಸ್ ಜಾರಿ ಮಾಡಿತು. ನೋಟಿಸ್ ಜಾರಿಯಾದ ಬಳಿಕ ಮುಂದಿನ ವಿಚಾರಣೆಗೆ ಪ್ರಕರಣ ಮುಂದೂಡಿಕೆ ಮಾಡಲಾಗಿದೆ.




