ಮೇನಕಾ ಗಾಂಧಿ ವಿರುದ್ಧದ ಮಾನಹಾನಿ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ
ವಿಚಾರಣಾ ಕೋರ್ಟ್ ಸಮನ್ಸ್ ಜಾರಿಗೆ 2 ವಾರ ತಡೆಯಾಜ್ಞೆ

ಬೆಂಗಳೂರು : ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಮೇನಕಾ ಸಂಜಯ್ ಗಾಂಧಿ ವಿರುದ್ಧ ಬೆಂಗಳೂರಿನ ನ್ಯಾಯಾಲಯದಲ್ಲಿ ನಡೆಯುತ್ತಿರುವ ಮಾನಹಾನಿ ಪ್ರಕರಣದ ಸಂಪೂರ್ಣ ವಿಚಾರಣೆ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಇದೇ ವೇಳೆ, ಸೆಷನ್ಸ್ ಕೋರ್ಟ್ನಲ್ಲಿ ಕ್ರಿಮಿನಲ್ ರಿವಿಷನ್ ಅರ್ಜಿ ಸಲ್ಲಿಸಲು ಮೇನಕಾ ಗಾಂಧಿಗೆ ಅವಕಾಶ ಕಲ್ಪಿಸಿ ವಿಚಾರಣಾ ನ್ಯಾಯಾಲಯದ ಸಮನ್ಸ್ ಜಾರಿಗೆ 2 ವಾರಗಳ ತಡೆಯಾಜ್ಞೆ ನೀಡಿದೆ.
ಬೆಂಗಳೂರಿನ 42ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಪ್ರೇಟ್ (ಎಸಿಜೆಎಂ) ನ್ಯಾಯಾಲಯದಲ್ಲಿರುವ ಪ್ರಕರಣ ಹಾಗೂ ಆ ಸಂಬಂಧ ಜಾರಿಗೊಳಿಸಲಾಗಿದ್ದ ಸಮನ್ಸ್ ರದ್ದು ಕೋರಿ ಮೇನಕಾ ಗಾಂಧಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಮೇನಕಾ ಗಾಂಧಿ ಪರ ವಕೀಲರು, ಅರ್ಜಿದಾರರು ದಿಲ್ಲಿಯ ನಿವಾಸಿಯಾಗಿದ್ದು, ಹಿರಿಯ ನಾಗರಿಕರಾಗಿದ್ದಾರೆ. ಅವರು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ. ಆದ್ದರಿಂದ, ಅವರು ಸೆಷನ್ಸ್ಕೋರ್ಟ್ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು, ಅದಕ್ಕೆ ವಿಚಾರಣಾ ನ್ಯಾಯಾಲಯದ ಆದೇಶದ ಜಾರಿಗೆ ತಡೆ ನೀಡಬೇಕು ಎಂದು ಕೋರಿದರು. ಈ ಮನವಿ ಪುರಸ್ಕರಿಸಿರುವ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದ ಸಮನ್ಸ್ಗೆ ಎರಡು ವಾರಗಳ ಕಾಲ ತಡೆ ನೀಡಿದೆ.
?ಪ್ರಕರಣವೇನು?: ಮೈಸೂರಿನ ಎಸ್.ಕೆ.ಮಿತ್ತಲ್ ಎಂಬವರು ಮೇನಕಾ ಗಾಂಧಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 499 ಮತ್ತು 500ರ (ಮಾನಹಾನಿ) ಅಡಿ ಖಾಸಗಿ ದೂರು ಸಲ್ಲಿಸಿದ್ದರು. ಈ ಸಂಬಂಧ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯದಲ್ಲಿರುವ ಪ್ರಕರಣ ಹಾಗೂ ಸಮನ್ಸ್ ಆದೇಶ ರದ್ದು ಕೋರಿ ಮೇನಕಾಗಾಂಧಿ ಹೈಕೋರ್ಟ್ ಮೊರೆ ಹೋಗಿದ್ದರು.






