ಸಾರಿಗೆ ನಿಗಮಗಳ ಬಸ್ ಮೇಲಿನ ತಂಬಾಕು ಉತ್ಪನ್ನಗಳ ಜಾಹೀರಾತು ತೆರವು ಸುತ್ತೋಲೆ ಪ್ರಶ್ನಿಸಿದ್ದ ಅರ್ಜಿ ವಜಾ

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳನ್ನು ಪ್ರಚಾರ ಮಾಡುವ ಜಾಹೀರಾತುಗಳನ್ನು ತೆರವುಗೊಳಿಸುವಂತೆ ಸಾರಿಗೆ ನಿಗಮಗಳು ನೀಡಿದ್ದ ಸುತ್ತೋಲೆಗಳ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ
ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಹೊರಡಿಸಿದ್ದ ಸುತ್ತೋಲೆಗಳನ್ನು ರದ್ದುಪಡಿಸುವಂತೆ ಕೋರಿ ವಿಮಲ್ ಇಲೈಚಿ ಸೇರಿ ವಿವಿಧ ಉತ್ಪನ್ನಗಳ ಜಾಹೀರಾತುಗಳ ಪ್ರದರ್ಶನಕ್ಕೆ ಸಾರಿಗೆ ನಿಗಮಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಸಾಯಿ ಅಡ್ವರ್ಟೈಸರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣವು ಅರ್ಜಿದಾರರು ಮತ್ತು ಸಾರಿಗೆ ನಿಗಮಗಳ ನಡುವಿನ ಒಪ್ಪಂದಕ್ಕೆ ಸಂಬಂಧಿಸಿದ್ದಾಗಿದ್ದು, ರಿಟ್ ಅರ್ಜಿ ವ್ಯಾಪ್ತಿಯಲ್ಲಿ ಪರಿಹಾರ ನೀಡಲಾಗುವುದಿಲ್ಲ ಎಂದು ತಿಳಿಸಿ, ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದೆ.
ಇದೇ ವೇಳೆ, ಸಾರಿಗೆ ನಿಗಮಗಳ ಸುತ್ತೋಲೆಗಳಿಗೆ ಅರ್ಜಿದಾರ ಸಂಸ್ಥೆ ಆಕ್ಷೇಪಣೆ ಸಲ್ಲಿಸಬಹುದಾಗಿದ್ದು, ಅದನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ನಿಗಮಗಳಿಗೆ ಸಂಪೂರ್ಣ ಸ್ವಾತಂತ್ರ್ಯವಿರಲಿದೆ. ಜತೆಗೆ, ಒಪ್ಪಂದದ ಪ್ರಕಾರ ಜಾಹೀರಾತು ಪ್ರದರ್ಶಿಸಲು ಸಾಧ್ಯವಾಗದಿದ್ದಲ್ಲಿ, ಅರ್ಜಿದಾರರು ಷರತ್ತುಗಳ ಅನ್ವಯ ಸೂಕ್ತ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣವೇನು?
ತಂಬಾಕು ಉತ್ಪನ್ನಗಳನ್ನು ನೇರ ಅಥವಾ ಪರೋಕ್ಷವಾಗಿ ಪ್ರಚಾರ ಮಾಡುವ ಜಾಹೀರಾತು ಸ್ಟಿಕ್ಕರ್ಗಳು ಹಾಗೂ ಗ್ಲೋ ಸೈನ್ಗಳನ್ನು ಬಸ್ಗಳು ಹಾಗೂ ಬಸ್ ನಿಲ್ದಾಣಗಳಿಂದ ತೆರವುಗೊಳಿಸುವಂತೆ ಜನವರಿ 31ರಂದು ಕೆಎಸ್ಆರ್ಟಿಸಿ ಹಾಗೂ ಫೆಬ್ರವರಿ 2ರಂದು ಬಿಎಂಟಿಸಿ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರ ಸಂಸ್ಥೆ, ಕಳೆದ ವರ್ಷ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಯಶಸ್ವಿ ಬಿಡ್ದಾರರಾಗಿ ಆಯ್ಕೆಯಾಗಿ, ಎರಡೂ ಸಾರಿಗೆ ನಿಗಮಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಅದರಂತೆ ಉತ್ಪನ್ನಗಳ ಜಾಹೀರಾತು ಪ್ರದರ್ಶಿಸಲು ಅನುಮತಿ ನೀಡಲಾಗಿತ್ತು. ಆದರೆ, ಒಪ್ಪಂದ ಜಾರಿಯಲ್ಲಿರುವಾಗಲೇ ನಿಗಮಗಳು ಹೊಸ ಸೂಚನೆಗಳನ್ನು ನೀಡಿರುವುದರಿಂದ ತಮ್ಮ ಜಾಹೀರಾತು ವ್ಯವಹಾರಕ್ಕೆ ತೀವ್ರ ತೊಂದರೆಯಾಗಿದೆ ಎಂದು ಆಕ್ಷೇಪಿಸಿತ್ತು.






