ಅನುದಾನಿತ ಶಾಲಾ-ಕಾಲೇಜುಗಳ ಹುದ್ದೆ ಭರ್ತಿ: 2015ರ ಕಟ್ ಆಫ್ ದಿನಾಂಕ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು : ರಾಜ್ಯದ ಖಾಸಗಿ ಅನುದಾನಿತ ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ನಿಧನ ಮತ್ತು ರಾಜೀನಾಮೆಯಿಂದ ತೆರವಾಗಿರುವ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ವಿಧಿಸಿದ್ದ 2015ರ ಡಿಸೆಂಬರ್ 31ರ ಕಟ್ ಆಫ್ (ಗಡುವು) ದಿನಾಂಕವನ್ನು ರದ್ದುಪಡಿಸಿರುವ ಹೈಕೋರ್ಟ್, ಸೂಕ್ತ ನೀತಿ ಅಥವಾ ತಾರ್ಕಿಕ ಕಾರಣಗಳಿಲ್ಲದೆ, ಕೇವಲ 2015ರ ನಂತರ ಖಾಲಿಯಾದ ಹುದ್ದೆಗಳೆಂಬ ನೆಪವೊಡ್ಡಿ ನೇಮಕಾತಿ ಅನುಮತಿ ಅರ್ಜಿಗಳನ್ನು ಸಾರಾಸಗಟಾಗಿ ತಿರಸ್ಕರಿಸುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಕರ್ನಾಟಕ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪರವಾಗಿ ಏಕಸದಸ್ಯ ನ್ಯಾಯಪೀಠ 2023ರ ಡಿಸೆಂಬರ್ 8ರಂದು ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಎಚ್. ಶಾಂತಿ ಭೂಷಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಕೋವಿಡ್-19 ಸಂದರ್ಭದ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ 2020ರ ಜೂನ್ 10ರಂದು ಹೊರಡಿಸಿದ್ದ ನೇಮಕಾತಿ ನಿರ್ಬಂಧವು 2020-21ನೇ ಹಣಕಾಸು ವರ್ಷಕ್ಕೆ ಮಾತ್ರ ಸೀಮಿತವಾಗಿತ್ತು. ಅದನ್ನು ಶಾಶ್ವತ ನಿಷೇಧವೆಂದು ಪರಿಗಣಿಸಲು ಸಾಧ್ಯವಿಲ್ಲ. ಅಲ್ಲದೆ, 2015ರ ಡಿಸೆಂಬರ್ 31ರ ನಂತರ ಖಾಲಿಯಾದ ಹುದ್ದೆಗಳನ್ನು ಭರ್ತಿ ಮಾಡಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು 2023ರ ಫೆಬ್ರವರಿ 2ರಂದು ಬರೆದಿದ್ದ ಪತ್ರಕ್ಕೆ ಯಾವುದೇ ಸ್ವತಂತ್ರ ಶಾಸನಬದ್ಧ ಆಧಾರಗಳಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಅನುದಾನಿತ ಸಂಸ್ಥೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದರಿಂದ ಸರ್ಕಾರದ ಬೊಕ್ಕಸದ ಮೇಲೆ ಉಂಟಾಗುವ ಆರ್ಥಿಕ ಪರಿಣಾಮಗಳ ಜತೆಗೆ, ವಿದ್ಯಾರ್ಥಿಗಳ ಸಂಖ್ಯೆ, ಮಂಜೂರಾದ ಹುದ್ದೆಗಳು, ಹಾಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆ, ಸಿಬ್ಬಂದಿ ಮಾದರಿ ಹಾಗೂ ಮೀಸಲಾತಿ ರೋಸ್ಟರ್‌ಗಳನ್ನು ಪರಿಗಣಿಸಬೇಕು. ಮುಖ್ಯವಾಗಿ, ಹುದ್ದೆಗಳು ಖಾಲಿ ಉಳಿಯುವುದರಿಂದ ಶಿಕ್ಷಣದ ಗುಣಮಟ್ಟ ಮತ್ತು ಸಂಸ್ಥೆಯ ಕಾರ್ಯನಿರ್ವಹಣೆಯ ಮೇಲೆ ಆಗುವ ಪರಿಣಾಮವನ್ನೂ ಸರ್ಕಾರ ಪರಿಶೀಲಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಸರ್ಕಾರದ ಪೂರ್ವಾನುಮತಿ ಕಡ್ಡಾಯ:
1999ರ ನೇಮಕಾತಿ ಮತ್ತು ಸೇವಾ ಷರತ್ತುಗಳ ನಿಯಮಗಳು ಹಾಗೂ 2006ರ ಪದವಿಪೂರ್ವ ಶಿಕ್ಷಣ ನಿಯಮಗಳ ಪ್ರಕಾರ, ನೇಮಕಾತಿ ಪ್ರಕ್ರಿಯೆ ಆರಂಭಿಸುವ ಮುನ್ನ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ನೇಮಕಾತಿ ಸಂಬಂಧ ಸರ್ಕಾರಕ್ಕೆ ಕೇವಲ ಮಾಹಿತಿ ನೀಡಿದರೆ ಸಾಕು ಎಂಬ ಏಕಸದಸ್ಯ ನ್ಯಾಯಪೀಠದ ಆದೇಶದ ಅಂಶವನ್ನು ವಿಭಾಗೀಯ ನ್ಯಾಯಪೀಠ ರದ್ದುಪಡಿಸಿದೆ.
ಕರ್ನಾಟಕ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟಕ್ಕೆ ಸದಸ್ಯ ಸಂಸ್ಥೆಗಳ ಪರವಾಗಿ ಅರ್ಜಿ ಸಲ್ಲಿಸುವ ಅಧಿಕೃತ ಅಧಿಕಾರವಿಲ್ಲದ ಕಾರಣ, ಆಯಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳೇ ಪ್ರತ್ಯೇಕವಾಗಿ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬೇಕು. ಅರ್ಜಿ ಸ್ವೀಕರಿಸಿದ 2 ತಿಂಗಳೊಳಗೆ ಪ್ರಾಧಿಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಒಂದು ವೇಳೆ ಅನುಮತಿ ನಿರಾಕರಿಸಿದರೆ ಅದಕ್ಕೆ ಸಕಾರಣಗಳನ್ನು ನೀಡಬೇಕು. ಕೇವಲ 2015ರ ಕಟ್ ಆಫ್ ದಿನಾಂಕ ಅಥವಾ 2023ರ ಪತ್ರವನ್ನು ಆಧರಿಸಿ ಅರ್ಜಿ ತಿರಸ್ಕರಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಈ ಆದೇಶದಿಂದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಸ್ವಯಂಚಾಲಿತ ಹಕ್ಕು ಅಥವಾ ನೇಮಕಗೊಂಡವರಿಗೆ ಸರ್ಕಾರದಿಂದ ವೇತನ ಅನುದಾನ ಪಡೆಯುವ ಖಚಿತ ಹಕ್ಕು ದೊರೆಯುವುದಿಲ್ಲ. ಪೂರ್ವಾನುಮತಿ ಮತ್ತು ನಿಗದಿತ ನೇಮಕಾತಿ ಪ್ರಕ್ರಿಯೆ ಕಡ್ಡಾಯವಾಗಿದ್ದು, ಅನುದಾನ ನೀಡುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಸರ್ಕಾರಕ್ಕೇ ಇರುತ್ತದೆ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.






