ಎಚ್.ಡಿ.ರೇವಣ್ಣ ವಿರುದ್ಧದ ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪ ರದ್ದುಗೊಳಿಸಿದ ಹೈಕೋರ್ಟ್

Photo: fb/prajwalrevanna
ಬೆಂಗಳೂರು: ಮನೆ ಕೆಲಸದ ಮಹಿಳೆಯ ಘನತೆಗೆ ಧಕ್ಕೆಯುಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ, ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧದ ಪ್ರಕರಣದಲ್ಲಿ ಕಾಗ್ನೈಜೆನ್ಸ್ (ವಿಚಾರಣೆಗೆ ಪರಿಗಣಿಸಿದ) ತೆಗೆದುಕೊಂಡು ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಆದರೆ, ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪವನ್ನು ಪರಿಗಣಿಸಲು ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿದೆ.
ಹಾಸನದ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಎಚ್. ಡಿ. ರೇವಣ್ಣ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿತು.
ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ಹೈಕೋರ್ಟ್, ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 354ರ (ಮಹಿಳೆಯ ಘನತೆಗೆ ಚ್ಯುತಿ) ಅಡಿ ಕಾಗ್ನೈಜೆನ್ಸ್ ತೆಗೆದಕೊಂಡು 42ನೇ ಎಸಿಜೆಎಂ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಪಡಿಸಿದೆ. ಆದರೆ, ಐಪಿಸಿ 354ಎ (ಲೈಂಗಿಕ ದೌರ್ಜನ್ಯ) ಅಡಿ ಸೂಕ್ತ ಆದೇಶ ಹೊರಡಿಸಲು ಪರಿಗಣಿಸುವಂತೆ ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿದೆ. ವಿಸ್ತೃತ ತೀರ್ಪಿನ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ತೀರ್ಪು ಪ್ರಕಟಿಸಿದ ಬಳಿಕ ನ್ಯಾಯಮೂರ್ತಿಗಳು, ದೂರಿನಲ್ಲಿನ ಆರೋಪಗಳು ಐಪಿಸಿ ಸೆಕ್ಷನ್ 354ಎ ಅಡಿ ಬರುತ್ತವೆ. ಐಪಿಸಿ ಸೆಕ್ಷನ್ 354 ಇಲ್ಲಿ ಅನ್ವಯಿಸುವುದಿಲ್ಲ. ನನ್ನ ಪ್ರಕಾರ ಸಂತ್ರಸ್ತೆಯ ಘನತೆಗೆ ಹಾನಿ ಮಾಡುವ ಉದ್ದೇಶ ತೋರುವುದಿಲ್ಲ. ಇದು ಲೈಂಗಿಕ ದೌರ್ಜನ್ಯವಾಗುತ್ತದೆ. ಇದು ನನ್ನ ಅಭಿಪ್ರಾಯ, ನಿಮಗೆ ಅಗತ್ಯವಿದ್ದರೆ ಅದನ್ನು ಪ್ರಶ್ನಿಸಬಹುದು ಎಂದು ಪ್ರಾಸಿಕ್ಯೂಷನ್ ಕುರಿತು ಹೇಳಿತು.
ಮೂರು ವರ್ಷ ಅಥವಾ ಅದಕ್ಕಿಂತ ಕಡಿಮೆ ಶಿಕ್ಷೆಯಾದರೆ ಪೊಲೀಸರು ಎಫ್ಐಆರ್ ದಾಖಲಿಸಲಾಗದು ಎಂಬ ವಾದವನ್ನೂ ತಳ್ಳಿಹಾಕಲಾಗಿದೆ ಎಂದೂ ಪೀಠ ಹೇಳಿತು. ರಾಜ್ಯ ಹೆಚ್ಚುವರಿ ಸರಕಾರಿ ಅಭಿಯೋಜಕ ಬಿ.ಎನ್. ಜಗದೀಶ್, 2024ರ ಸೆಪ್ಟಂಬರ್ 9ರಂದು ವಿಚಾರಣಾ ನ್ಯಾಯಾಲಯ ಐಪಿಸಿ ಸೆಕ್ಷನ್ 352 ಹಾಗೂ 354ಎ ಆರೋಪಗಳಿಗೆ ಕಾಗ್ನೈಜೆನ್ಸ್ ತೆಗೆದುಕೊಂಡಿದೆ. ಈ ಎರಡೂ ಸೆಕ್ಷನ್ ಗಳ ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.







