ಪುನೀತ್ ರಾಜ್ಕುಮಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್: ವಿದ್ಯಾರ್ಥಿಗೆ ಹೈಕೋರ್ಟ್ ತರಾಟೆ, ಪ್ರಕರಣ ರದ್ದು

ಪುನೀತ್ ರಾಜಕುಮಾರ್
ಬೆಂಗಳೂರು : ನಟ ದಿವಂಗತ ಪುನೀತ್ ರಾಜ್ಕುಮಾರ್ ಅವರ ನಿಧನದ ಸಂದರ್ಭದಲ್ಲಿ ಇನ್ಸ್ಟಾಗ್ರಾಂನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ವಿದ್ಯಾರ್ಥಿಯ ವರ್ತನೆಯನ್ನು ಕರ್ನಾಟಕ ಹೈಕೋರ್ಟ್ ತೀವ್ರವಾಗಿ ಖಂಡಿಸಿದ್ದು, ಯುವಕನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆತನ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದೆ.
2021ರಲ್ಲಿ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಆರೋಪಿ ರಿತ್ವಿಕ್ ಶರ್ಮಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿತು.
ವಿಚಾರಣೆ ವೇಳೆ ನ್ಯಾಯಪೀಠ ಅರ್ಜಿದಾರನ ನಡೆಗೆ ಕಟು ಆಕ್ಷೇಪ ವ್ಯಕ್ತಪಡಿಸಿತು. ಇಡೀ ರಾಜ್ಯ ಗೌರವಿಸುವ ಮತ್ತು ಅಪಾರ ಅಭಿಮಾನಿಗಳನ್ನು ಹೊಂದಿರುವ ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ನಿಧನದ ಸಂದರ್ಭದಲ್ಲಿ ಇಂತಹ ಅವಹೇಳನಕಾರಿ ಸಂದೇಶ ಪ್ರಕಟಿಸಿರುವುದು ಅತ್ಯಂತ ಖಂಡನೀಯ ಹಾಗೂ ದುಃಖಕರ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಸಾಮಾಜಿಕ ಜಾಲತಾಣಗಳಿವೆ ಎಂಬ ಕಾರಣಕ್ಕೆ ಏನು ಬೇಕಾದರೂ ಪೋಸ್ಟ್ ಮಾಡುವಂತಿಲ್ಲ. ಪುನೀತ್ ರಾಜಕುಮಾರ್ ಅವರು ಯುವಜನರಲ್ಲಿ ಮದ್ಯಪಾನದ ವಿರುದ್ಧ ಜಾಗೃತಿ ಮೂಡಿಸುತ್ತಿದ್ದ ವ್ಯಕ್ತಿಯಾಗಿದ್ದರು. ಅಂತಹ ಸಂದರ್ಭದಲ್ಲಿ ಬಿಯರ್ ಬಾಟಲಿಯ ಚಿತ್ರ ಜೊತೆಗೆ ಅವಹೇಳನಕಾರಿ ಪದ ಬಳಸಿ ಪೋಸ್ಟ್ ಮಾಡಿರುವುದು ಐಟಿ ಕಾಯ್ದೆಯಡಿ ಅಪರಾಧವಾಗಬಹುದು ಎಂದು ನ್ಯಾಯಪೀಠ ಎಚ್ಚರಿಕೆ ನೀಡಿತು.
2021ರ ನವೆಂಬರ್ 1ರಂದು ರಿತ್ವಿಕ್ ಶರ್ಮಾ, ಕಿಂಗ್ಫಿಷರ್ ಬಿಯರ್ ಬಾಟಲಿಯ ಚಿತ್ರದೊಂದಿಗೆ ಪುನೀತ್ ರಾಜ್ಕುಮಾರ್ ಅವರನ್ನು ಅವಹೇಳನಿಸುವ ಆಂಗ್ಲ ಪದ ಬಳಸಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದನು. ಈ ಪೋಸ್ಟ್ ಕನ್ನಡಿಗರು ಹಾಗೂ ಅಪ್ಪು ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಸಂಬಂಧ ಸಮಾಜದಲ್ಲಿ ಶಾಂತಿ ಭಂಗಕ್ಕೆ ಯತ್ನಿಸಿದ ಆರೋಪದಡಿ ಸುಬ್ರಹ್ಮಣ್ಯನಗರ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದರೆ ಪ್ರಕರಣದ ಸಂದರ್ಭ, ಅರ್ಜಿದಾರನ ವಯಸ್ಸು ಮತ್ತು ಭವಿಷ್ಯವನ್ನು ಪರಿಗಣಿಸಿ ಹೈಕೋರ್ಟ್ ಕ್ರಿಮಿನಲ್ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.






