ಮಾಧ್ಯಮಗಳ ವಿರುದ್ಧ ಕ್ರಮಕ್ಕೆ ನಿರ್ದೇಶನ ಕೋರಿ ದರ್ಶನ್ ಸಲ್ಲಿಸಿರುವ ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ನಟ ದರ್ಶನ್
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿವರಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯ ಹೊರಡಿಸಿರುವ ನಿರ್ಬಂಧಕಾದೇಶ ಉಲ್ಲಂಘಿಸುತ್ತಿರುವ ಮಾಧ್ಯಮಗಳ (ಚಾನಲ್) ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.
ನಟ ದರ್ಶನ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ಗುರುವಾರ (ಎ.9) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮುಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ, ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತು.
ಅರ್ಜಿ ವಿಚಾರಣೆ ವೇಳೆ ಮಾಧ್ಯಮಗಳ ನಡವಳಿಕೆಯನ್ನು ಮೌಖಿಕವಾಗಿ ಖಂಡಿಸಿದ ನ್ಯಾಯಪೀಠ, ಪ್ರಕರಣದ ಟ್ರಯಲ್ (ವಿಚಾರಣೆ) ನಡೆಯುತ್ತಿದೆ. ಅವರು (ಮಾಧ್ಯಮಗಳು) ಅದನ್ನು ಮರುಸೃಷ್ಟಿಸುತ್ತಿರುವ ರೀತಿ ನೋಡಿ, ಪ್ರಕರಣ ವಿಚಾರಣಾ ಹಂತದಲ್ಲಿರುವಾಗ ಮಾಧ್ಯಮಗಳ ಇಂತಹ ವರ್ತನೆಯು ನ್ಯಾಯದಾನದ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದಂತಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಇದಕ್ಕೂ ಮುನ್ನ ದರ್ಶನ್ ಪರ ವಕೀಲರು ವಾದ ಮಂಡಿಸಿ, ಮಾಧ್ಯಮಗಳು ಪ್ರಕರಣ ಕುರಿತು ಸುದೀರ್ಘವಾದ ದೈನಂದಿನ ಚರ್ಚೆಗಳನ್ನು ನಡೆಸುತ್ತವೆ. ನಿವೃತ್ತ ಪೊಲೀಸ್ ಅಧಿಕಾರಿಗಳು, ಹಿರಿಯ ವಕೀಲರನ್ನು ಚರ್ಚೆಗೆ ಕರೆಸಿ ಮಾಧ್ಯಮಗಳು ಅವರದ್ದೇ ಆದ ತನಿಖಾ ನಿರೂಪಣೆ ರೂಪಿಸುತ್ತಿವೆ ಎಂದು ಟ್ರಯಲ್ ಸಂದರ್ಭದಲ್ಲಿ ಸಂತ್ರಸ್ತನ ಸಂಬಂಧಿಕರೊಬ್ಬರು ಪ್ರತಿಕೂಲ ಸಾಕ್ಷ್ಯ ನುಡಿದಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ 4 ಗಂಟೆಗಳ ಕಾಲ ವಿಶ್ಲೇಷಣೆ ನಡೆಸಲಾಯಿತು ಎಂದು ನ್ಯಾಯಪೀಠಕ್ಕೆ ವಿವರಿಸಿದರು.







