ಹಿರೇಬೆಣಕಲ್ ಪ್ರಾಗೈತಿಹಾಸಿಕ ನೆಲೆಯ ಸಂಶೋಧನಾ ಸಮಿತಿ ರಚನೆ: ಸಚಿವ ಎಚ್.ಕೆ.ಪಾಟೀಲ್

ಬೆಂಗಳೂರು, ಆ.11: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದ ಮೌರ್ಯರ ಗುಡ್ಡದಲ್ಲಿರುವ ಪ್ರಾಗೈತಿಹಾಸಿಕ ನೆಲೆಯ ಕುರಿತು ಸ್ಥಳೀಯರ ಸಹಕಾರದೊಂದಿಗೆ ಹೆಚ್ಚಿನ ಸಂಶೋಧನೆ ಮತ್ತು ಅಧ್ಯಯನ ಮಾಡಲು ತಜ್ಞರನ್ನು ಒಳಗೊಂಡ ಹಿರೇಬೆಣಕಲ್ ಪ್ರಾಗೈತಿಹಾಸಿಕ ನೆಲೆಯ ಸಂಶೋಧನಾ ಸಮಿತಿ ರಚಿಸುವ ಕುರಿತು ಸರಕಾರದ ಪರಿಶೀಲನೆಯಲ್ಲಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಸೋಮವಾರ ವಿಧಾನಸಭೆಯಲ್ಲಿ ಮೌರ್ಯರ ಸಾಮ್ರಾಜ್ಯದ ಅಸ್ತಿತ್ವ ಮತ್ತು ಬೌದ್ಧ ಧರ್ಮದ ಪ್ರಸಾರಕ್ಕೆ ಪ್ರಮುಖ ಪುರಾವೆಯಾಗಿ ಇತಿಹಾಸಕಾರರಿಗೆ ಮತ್ತು ಸಂಶೋಧಕರಿಗೆ ಅಮೂಲ್ಯವಾದ ಮಾಹಿತಿಯನ್ನು ಒದಗಿಸುವ ಮೌರ್ಯರ ಗುಡ್ಡವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಕುರಿತು ಪಕ್ಷೇತರ ಸದಸ್ಯ ಗಾಲಿ ಜನಾರ್ದನ ರೆಡ್ಡಿ ಮಂಡಿಸಿದ್ದ ಗಮನ ಸೆಳೆಯುವ ಸೂಚನೆಗೆ ಅವರು ಉತ್ತರಿಸಿದರು.
ಹಿರೇಬೆಣಕಲ್ಲಿನ ಸಮಾಧಿಗಳ ಮತ್ತು ಸಮಾಧಿಗಳ ಸುತ್ತಮುತ್ತಲಿನ ಗವಿ ಕಲ್ಲಾಸರೆಗಳಲ್ಲಿ ಶಿಲಾಯುಗದ ವರ್ಣಚಿತ್ರಗಳು, ದೇಶದ ಬಂಡೆ ಚಿತ್ರಗಳಲ್ಲಿಯೇ ಬೃಹತ್ ಪ್ರಮಾಣದ್ದಾಗಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಅನುಮತಿಯನ್ನು ಪಡೆದು ಛಾಯಾ ಚಿತ್ರಗಾರರಿಂದ ಛಾಯಾಚಿತ್ರವನ್ನು ಸೆರೆ ಹಿಡಿಯಲಾಗಿದೆ. ಈ ಛಾಯಾಚಿತ್ರದ ಪ್ರದರ್ಶನವನ್ನು ಅಧಿವೇಶನ ಸಂದರ್ಭದಲ್ಲಿ ವಿಧಾನಸೌಧಲ್ಲಿ ಏರ್ಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
2024-25ನೆ ಸಾಲಿನಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಹಿರೇಬೆಣಕಲ್ ಐತಿಹಾಸಿಕ ಪ್ರವಾಸಿ ತಾಣವನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಹೋಡಿರ್ಂಗ್, ಸೈನೇಜ್ ಮತ್ತು ಮಾಹಿತಿ ಫಲಕಗಳನ್ನು ಪ್ರವಾಸಿಗರ ಅನುಕೂಲಕ್ಕಾಗಿ ಅಳವಡಿಸಲಾಗಿದೆ ಎಂದು ಅವರು ಹೇಳಿದರು.
ಈ ಪ್ರದೇಶವು ಅರಣ್ಯ ಇಲಾಖೆ ಹಾಗೂ ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆಯ ವ್ಯಾಪ್ತಿಗೆ ಒಳಪಡುವುದರಿಂದ ಈವರೆಗೂ ಪ್ರವಾಸೋದ್ಯಮ ಇಲಾಖೆಯಿಂದ ಪ್ರದೇಶದಲ್ಲಿ ಯಾವುದೆ ಕಾಮಗಾರಿಗಳನ್ನು ಕೈಗೊಂಡಿಲ್ಲ. ಮೌರ್ಯರ ಗುಡ್ಡವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ದಿಪಡಿಸಿ, ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸುವ ಕುರಿತು ಸಕ್ಷಮ ಪ್ರಾಧಿಕಾರದಿಂದ ನಿರಾಕ್ಷೇಪಣೆ ಪತ್ರ ಪಡೆದು, ಬಜೆಟ್‍ನಲ್ಲಿ ಒದಗಿಸಿರುವ ಅನುದಾನದ ಲಭ್ಯತೆಗೆ ಅನುಗುಣವಾಗಿ ನೂತನ ಕಾಮಗಾರಿ ಕೈಗೆತ್ತಿಕೊಳ್ಳಲು ಪರಿಶೀಲಿಸಲಾಗುವುದು ಎಂದು ಎಚ್.ಕೆ.ಪಾಟೀಲ್ ಹೇಳಿದರು.







