ಹಿರಿಯೂರು ಉಪ ಚುನಾವಣೆ; ಸಿಎಂ, ಸಚಿವರ ಸಮಾಲೋಚನೆ

ಬೆಂಗಳೂರು : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಪಕ್ಷವು ಅಗತ್ಯ ಸಿದ್ಧತೆಯನ್ನು ಆರಂಭಿಸಿದೆ.
ಆ ನಿಟ್ಟಿನಲ್ಲಿ ಈಗಾಗಲೇ ಹಲವಾರು ನಾಯಕರ ಜೊತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಮಾಲೋಚನೆ ನಡೆಸಿದ್ದು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಬುಧವಾರ ಸದಾಶಿವ ನಗರದಲ್ಲಿರುವ ಸಿಎಂ ನಿವಾಸಕ್ಕೆ ಭೇಟಿ ನೀಡಿ ದೀಪಾವಳಿ ತಿಳಿಸಿದರು. ಅಲ್ಲದೆ, ಎಐಸಿಸಿ ಮುಖಂಡರಾದ ಸೋನಿಯಾ ಗಾಂಧಿ ಅವರ ಆತ್ಮಕಥೆಯನ್ನು ಕಾಣಿಕೆಯಾಗಿ ನೀಡಿ ಶುಭಾಶಯ ಕೋರಿದರು.
ಇದೇ ವೇಳೆ ಉಭಯ ನಾಯಕರು ಹಿರಿಯೂರು ಉಪಚುನಾವಣೆ ಸಂಬಂಧ ಸಮಾಲೋಚನೆ ನಡೆಸಿದರು. ಉಪಚುನಾವಣೆಗೆ ಎನ್ಡಿಎ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ದಟ್ಟವಾಗಿರುವುದರಿಂದ ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕಾಗಿದೆ ಎಂದು ಸಿಎಂ ಸಲಹೆ-ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಹಿರಿಯೂರು ಕ್ಷೇತ್ರದ ಉಪಚುನಾವಣೆಗೆ ಶೀಘ್ರದಲ್ಲೇ ದಿನಾಂಕ ಪ್ರಕಟವಾಗುವ ನಿರೀಕ್ಷೆ ಇದೆ. ನಮ್ಮ ಸರಕಾರದ ಯೋಜನೆಗಳು ಹಾಗೂ ಅನುಷ್ಠಾನಕ್ಕೆ ಬಂದಿರುವ ಯೋಜನೆಗಳನ್ನು ಜನರಿಗೆ ಪ್ರಚಾರ ಪಡಿಸಲು ಕ್ರಮ ಕೈಗೊಳ್ಳಬೇಕೆಂದು ಸಿಎಂ ಸೂಚಿಸಿದ್ದಾರೆಂದು ಗೊತ್ತಾಗಿದೆ. ಸಚಿವ ಡಿ.ಸುಧಾಕರ್ ನಿಧನದಿಂದ ತೆರವಾಗಿರುವ ಹಿರಿಯೂರು ಕ್ಷೇತ್ರಕ್ಕೆ ಚುನಾವಣೆ ಆಯೋಗ ಶೀಘ್ರವೇ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆಗಳಿವೆ.






