ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸಲು ಸಚಿವರ ಆಗ್ರಹ: ಎಚ್.ಕೆ.ಪಾಟೀಲ್

ಬೆಂಗಳೂರು : ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 519 ಮೀಟರ್ ನಿಂದ 524.256 ಮೀಟರ್ ವರೆಗೆ ಎತ್ತರಿಸಲು ಕಾನೂನಾತ್ಮಕವಾಗಿ ಯಾವುದೇ ತೊಡಕುಗಳು ಇಲ್ಲದೇ ಇರುವುದರಿಂದ ಅಣೆಕಟ್ಟೆಯ ಎತ್ತರವನ್ನು ಹೆಚ್ಚಳ ಮಾಡಬೇಕೆಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಸಚಿವರು ಒಮ್ಮತದಿಂದ ಆಗ್ರಹಿಸಿದ್ದೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಶನಿವಾರ ನಗರದಲ್ಲಿ ಮುಖ್ಯಮಂತ್ರಿಯ ಸರಕಾರಿ ನಿವಾಸ ಕಾವೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ಜಲವಿವಾದ ನ್ಯಾಯಾಧೀಕರಣ-2ರ ತೀರ್ಪು ಪ್ರಕಟವಾಗಿ 15 ವರ್ಷಗಳು ಗತಿಸಿವೆ. ತೀರ್ಪಿನ ಅವಧಿ 40 ವರ್ಷ. ಹೀಗೆಯೇ ಇನ್ನೈದು ವರ್ಷ ಕಳೆದರೆ ಐತೀರ್ಪು ಅನುಷ್ಠಾನದ ಅರ್ಧ ಅವಧಿ ಪೂರ್ಣಗೊಳ್ಳುತ್ತದೆ ಎಂದು ಹೇಳಿದರು.
ರೈತರ ಹೊಲಗಳಿಗೆ ಹರಿಯಬೇಕಾದ ನೀರು ಸಮುದ್ರಕ್ಕೆ ಹರಿದು ವ್ಯರ್ಥವಾಗುತ್ತಿದೆ. 16 ಸಾವಿರ ಕೋಟಿ ರೂಪಾಯಿಯ ಬಂಡವಾಳ ಹೂಡಿ ಕೃಷ್ಣಾ ಮೇಲ್ದಂಡೆ ಯೋಜನೆ-3 ಅಡಿಯಲ್ಲಿ ಕಾಲುವೆ ಜಾಲ ನಿರ್ಮಾಣ ಮಾಡಲಾಗಿದೆ. ಆದರೆ, ಈ ಕಾಲುವೆಯ ಜಾಲ ವ್ಯರ್ಥವಾಗುತ್ತಿದೆ. ಕರ್ನಾಟಕದ ನ್ಯಾಯಯುತ ಹಕ್ಕಿಗೆ ಕೇಂದ್ರ ಸರಕಾರ ಕೊಡಲಿಪೆಟ್ಟು ಹಾಕಿ ರಾಜ್ಯದ ಹಕ್ಕನ್ನು ನಿರಾಕರಿಸಿ ಕೆಳದಂಡೆ ರಾಜ್ಯಗಳಾದ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಕರ್ನಾಟಕದ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸುತ್ತಿದೆ ಎಂದು ಅವರು ಆರೋಪಿಸಿದರು.
ಕಳೆದ 5 ವರ್ಷಗಳಲ್ಲಿ ಸತತವಾಗಿ ಪ್ರವಾಹದಿಂದ ಕೃಷ್ಣಾ ನದಿ ಪಾತ್ರದ ಬಹುತೇಕ ಭಾಗ ಪ್ರವಾಹಪೀಡಿತವಾಗಿ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಪ್ರವಾಹ ನಿರ್ವಹಣೆಗಾಗಿ ನಾವು ಈ ನೀರನ್ನು ಕಾಲುವೆಗೆ ಹರಿಸಿಕೊಳ್ಳಬಹುದು ಎಂಬ ರಚನಾತ್ಮಕ ಸಲಹೆಯನ್ನು ಸಭೆಯಲ್ಲಿ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.







