ದತ್ತು ಪಡೆಯುವ ಮೂಲಕ ಪಾರಂಪರಿಕ ತಾಣಗಳನ್ನು ಅಭಿವೃದ್ಧಿಪಡಿಸಿ : ಎಚ್.ಕೆ.ಪಾಟೀಲ್
‘ನಮ್ಮ ಆರ್ಟ್ ಬೆಂಗಳೂರು’ ರಾಷ್ಟ್ರೀಯ ಕಲಾ ಉತ್ಸವ ಉದ್ಘಾಟನೆ

ಬೆಂಗಳೂರು : ರಾಜ್ಯದಲ್ಲಿರುವ ಪಾರಂಪರಿಕ ತಾಣಗಳನ್ನು ಉದ್ಯಮಿಗಳು, ಶ್ರೀಮಂತರು ಸೇರಿ ಉಳ್ಳವರು ದತ್ತು ಪಡೆಯಬೇಕು. ಈ ಮೂಲಕ ಪಾರಂಪರಿಕ ತಾಣಗಳನ್ನು ಅಭಿವೃದ್ಧಿಪಡಿಸಬಹುದು ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಬುಧವಾರ ಇಲ್ಲಿನ ಕರ್ನಾಟಕ ಚಿತ್ರಕಲಾ ಪರಿಷತ್ತು ಆವರಣದಲ್ಲಿ ಆಯೋಜಿಸಿದ್ದ ‘ನಮ್ಮ ಆರ್ಟ್ ಬೆಂಗಳೂರು’ ಪ್ರಥಮ ರಾಷ್ಟ್ರೀಯ ಕಲಾ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚು ಪಾರಂಪರಿಕ ತಾಣಗಳಿವೆ. ಸರಕಾರದಿಂದಲೇ ಎಲ್ಲವನ್ನೂ ನಿರ್ವಹಣೆ ಕಷ್ಟ. ಹೀಗಾಗಿ ‘ನಮ್ಮ ಸ್ಮಾರಕ ದತ್ತು ಯೋಜನೆ’ ಅಡಿಯಲ್ಲಿ ದತ್ತು ಪಡೆಯಬೇಕು ಎಂದರು.
ಪ್ರವಾಸೋದ್ಯಮವನ್ನು ಉತ್ತೇಜಿಸಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಕೈಗಾರಿಕೋದ್ಯಮಿಗಳು, ಮಠಗಳು, ಉದ್ಯಮಿಗಳು, ಟ್ರಸ್ಟ್ ಗಳು, ಸಂಘಟನೆಗಳು ಸೇರಿದಂತೆ ಇತರರು ಸ್ಮಾರಕಗಳನ್ನು ನಮ್ಮ ಸ್ಮಾರಕ ದತ್ತು ಯೋಜನೆಯಡಿ ದತ್ತು ಪಡೆದರೆ ಸ್ಮಾರಕಗಳ ನಿರ್ವಹಣೆಗೆ ಸಹಕಾರಿಯಾಗುತ್ತದೆ. ರಾಜ್ಯದ ಸ್ಮಾರಕಗಳ ಸಂರಕ್ಷಣೆಗೆ ಅಗ್ಯವಿರುವ ಮೂಲಸೌಕರ್ಯಗಳನ್ನು ಸೃಷ್ಟಿಸಲು ಸಹಕಾರಿಯಾಗುತ್ತದೆ. ಉಳ್ಳವರು ಬನ್ನಿ ಕಲೆಯನ್ನು ಉಳಿಸಿ ಎಂದು ಅವರು ತಿಳಿಸಿದರು.
ಕರ್ನಾಟಕ ಚಿತ್ರಕಲಾ ಪರಿಷತ್ತು ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ‘ನಮ್ಮ ಆರ್ಟ್ ಬೆಂಗಳೂರು’ ಕಲಾವಿದರು, ಕಲಾಪ್ರೇಮಿಗಳ ನಡುವೆ ನೇರ ಸಂಪರ್ಕವನ್ನು ಒದಗಿಸುವ ಕಾರ್ಯಕ್ರಮವಾಗಿದೆ. ಕಾರ್ಯಕ್ರಮಕ್ಕೆ ರಾಜ್ಯ ಸರಕಾರ 25 ಲಕ್ಷ ರೂ. ಅನುದಾನವನ್ನು ನೀಡಿ ಸಹಕರಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು ಟ್ರಸ್ಟ್ ಅಧ್ಯಕ್ಷ ಎಸ್.ಎನ್.ಅಗರವಾಲ್, ಪ್ರಧಾನ ಕಾರ್ಯದರ್ಶಿ ಶಶಿಧರ್ ರಾವ್, ಶಾಸಕ ಅಶೋಕ್ ಮನಗೂಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







