ನಾಳೆ ಎಥೆನಾಲ್ ಉತ್ಪಾದಕರೊಂದಿಗೆ ಮುಖ್ಯಮಂತ್ರಿ ಸಭೆ : ಎಚ್.ಕೆ.ಪಾಟೀಲ್

ಬೆಂಗಳೂರು : ಮೆಕ್ಕೆ ಜೋಳದ ಬೆಲೆ ತೀವ್ರವಾಗಿ ಕುಸಿದಿರುವುದರ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆಸಲಾಗಿದ್ದು, ಮೆಕ್ಕೆ ಜೋಳದಿಂದ ಎಥೆನಾಲ್ ಉತ್ಪಾದಿಸುವವರೊಂದಿಗೆ ಶುಕ್ರವಾರ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಥೆನಾಲ್ ಅನ್ನು ಮೊಲಸಿಸ್, ಅಕ್ಕಿ ಹಾಗೂ ಮೆಕ್ಕೆಜೋಳದಿಂದ ತಯಾರಿಸಲಾಗುತ್ತದೆ. ಕೇಂದ್ರ ಸರಕಾರವು ರಾಜ್ಯದ ಡಿಸ್ಟಲರಿಗಳಿಗೆ ಎಥೆನಾಲ್ ಉತ್ಪಾದನೆ ಸಾಮರ್ಥ್ಯ ಹೆಚ್ಚಿದ್ದರೂ, ಹಂಚಿಕೆಯನ್ನು ಕಡಿಮೆ ಮಾಡಲಾಗಿದೆ. ಅಲ್ಲದೆ, ಜೋಳ ಖರೀದಿ ಪ್ರಮಾಣವನ್ನು ಶೇ.30ರಷ್ಟು ಕಡಿತ ಮಾಡಿದ್ದಾರೆ. ಈ ಎಲ್ಲ ಸಮಸ್ಯೆಗಳ ಕುರಿತು ಈಗಾಗಲೆ ಮುಖ್ಯಮಂತ್ರಿ, ಪ್ರಧಾನಮಂತ್ರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ ಎಂದು ಹೇಳಿದರು.
ಕೇಂದ್ರ ಸರಕಾರದ ನೀತಿಗಳಿಂದಾಗಿ ರೈತರಿಗೆ ಹೊಡೆತ ಬೀಳುತ್ತಿದೆ. ಕೇಂದ್ರ ಸರಕಾರವು ಕೂಡಲೆ ಗೋವಿನ ಜೋಳ ಖರೀದಿ ಮಾಡಲು ಮುಂದೆ ಬರಬೇಕು. ಅದೇ ರೀತಿ ಹೆಸರು ಕಾಳು ಬೆಲೆಯು ಕನಿಷ್ಠ ಬೆಂಬಲ ಬೆಲೆಗಿಂತ ತೀವ್ರ ಕುಸಿದಿರುವುದು ರೈತರಲ್ಲಿ ಆತಂಕ ಮನೆ ಮಾಡುವಂತಾಗಿದೆ. ಆದುದರಿಂದ, ಕೇಂದ್ರ ಸರಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಎಚ್.ಕೆ.ಪಾಟೀಲ್ ಕೋರಿದರು.
ನಾಯಕತ್ವ ಬದಲಾವಣೆ ಕುರಿತು ನಡೆಯುತ್ತಿರುವ ಬೆಳವಣಿಗೆಗಳಿಂದಾಗಿ ಸರಕಾರದ ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದಿಲ್ಲವೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ನಮ್ಮ ಸರಕಾರದಲ್ಲಿ ಯಾವುದೆ ಗೊಂದಲಗಳಿಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ, ಸರಕಾರದ ವೇಗವನ್ನು ಕಡಿಮೆ ಮಾಡುವ ಪ್ರಯತ್ನ ಅಷ್ಟೇ ಎಂದರು.







