ದೇವನಹಳ್ಳಿಯ 1,777 ಎಕರೆ ಇನ್ನು ʼಶಾಶ್ವತ ವಿಶೇಷ ಕೃಷಿ ವಲಯʼ : ಎಚ್.ಕೆ.ಪಾಟೀಲ್

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯ 1,777ಎಕರೆ ಭೂಮಿಯನ್ನು `ಶಾಶ್ವತ ವಿಶೇಷ ಕೃಷಿ ವಲಯ’ ಎಂದು ಘೋಷಿಸಲು ಗುರುವಾರ ನಡೆದ ಸಂಪುಟ ಸಭೆಯು ಒಪ್ಪಿಗೆ ನೀಡಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಹಿತವನ್ನು ಪರಿಗಣಿಸಿ, ಅವರಿಗೆ ಪೂರಕವಾಗಿ ಸ್ಪಂದಿಸಲಾಗಿದೆ. 1996ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ಕಲಂ 4ರ ಅಡಿಯಲ್ಲಿರುವ ಅಧಿಕಾರವನ್ನು ಬಳಸಿಕೊಂಡು, 1,777ಎಕರೆಯನ್ನು ಪ್ರಾಥಮಿಕ ಅಧಿಸೂಚನೆಯಿಂದ ಹೊರಗಿಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇಷ್ಟು ಭೂಮಿಯನ್ನು ಶಾಶ್ವತ ವಿಶೇಷ ಕೃಷಿ ವಲಯವೆಂದು ಘೋಷಿಸಲು ಅಗತ್ಯವಿರುವ ರೂಪುರೇಷೆ ಸಿದ್ಧಪಡಿಸಲು ತಜ್ಞರ ಸಮಿತಿ ರಚಿಸಲಾಗುವುದು ಮತ್ತು ನಗರಾಭಿವೃದ್ಧಿ ಇಲಾಖೆಯ ಸಂಬಂಧಿತ ಸಮವರ್ತಿ ಅಧಿಸೂಚನೆ ಹೊರಡಿಸಲಾಗುವುದು. ಜೊತೆಗೆ, ಈ ಜಮೀನಿನ ಪಹಣಿಗಳಲ್ಲಿನ ಕಾಲಂ 11ರಲ್ಲಿ `ಶಾಶ್ವತ ವಿಶೇಷ ಕೃಷಿ ವಲಯ’ವೆಂದು ನಮೂದಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಒಂದು ವೇಳೆ ಈ 13 ಗ್ರಾಮಗಳ ರೈತರೆ ಸ್ವಯಂಪ್ರೇರಿತವಾಗಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ತಮ್ಮ ಜಮೀನುಗಳನ್ನು ಬಿಟ್ಟುಕೊಡಲು ಮುಂದೆ ಬಂದಲ್ಲಿ ಅಂತಹ ಜಮೀನುಗಳನ್ನು ಅಗತ್ಯಾನುಸಾರ ಮತ್ತು ನಿಯಮಾನುಸಾರ ಸ್ವಾಧೀನ ಪಡಿಸಿಕೊಳ್ಳಲಾಗುವುದು. ಇದಕ್ಕಾಗಿ ರೈತರಿಗೆ 3 ತಿಂಗಳ ಕಾಲಾವಕಾಶ ನೀಡಲಾಗುವುದು. ಇಂತಹ ಪ್ರಕರಣಗಳಲ್ಲಿ ಭೂ ದರ ನಿರ್ಧರಣಾ ಸಮಿತಿಯ ತೀರ್ಮಾನದಂತೆ ಸೂಕ್ತ ಪರಿಹಾರವನ್ನೂ ನೀಡಲಾಗುವುದು ಎಂದು ಎಚ್.ಕೆ.ಪಾಟೀಲ್ ಸ್ಪಷ್ಟಪಡಿಸಿದರು.







