ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಗೃಹ ಸಚಿವರು ಗಮನ ಹರಿಸಲಿ: ಛಲವಾದಿ ನಾರಾಯಣಸ್ವಾಮಿ
"ಪ್ರಿಯಾಂಕ್ ಖರ್ಗೆ ಅವರಿಗೆ ಅನುಭವದ ಕೊರತೆಯಿದೆ"

ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು: ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ, ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗಮನ ಹರಿಸಬೇಕು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಿವಿಮಾತು ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರನ್ನು ನನ್ನ ಸಹೋದರ ಎಂದು ಭಾವಿಸಿದ್ದೇನೆ. ಆದರೆ, ಇಂದು ರಾಜ್ಯದಲ್ಲಿ ದಲಿತರಿಗೆ ಗರಿಷ್ಠ ಅನ್ಯಾಯವಾಗುತ್ತಿದೆ. ಕೊಲೆಗಳು, ಅತ್ಯಾಚಾರಗಳು ನಡೆಯುತ್ತಿವೆ. ಸುಮಾರು 17 ಕಡೆಗಳಲ್ಲಿ ಕೊಲೆಗಳಾಗಿವೆ. ಇಂದಿನವರೆಗೂ ಈ ಪ್ರಕರಣಗಳ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ ಎಂದು ತಿಳಿಸಿದರು.
“ಪ್ರಿಯಾಂಕ್ ಖರ್ಗೆ ಅವರಿಗೆ ಅನುಭವದ ಕೊರತೆಯಿದೆ. ನನ್ನ ಶಕ್ತಿ ಕೇವಲ ನಮ್ಮ ತಂದೆ ಎಂದು ತಿಳಿಯಬಾರದು. ನನ್ನ ಶಕ್ತಿ ನನ್ನ ಅನುಭವ ಮತ್ತು ಪ್ರಜ್ಞೆ ಎಂದು ಭಾವಿಸಬೇಕು. ರಾಜಕಾರಣ ಮಾಡುವುದಷ್ಟೇ ಅಲ್ಲದೆ, ಅಧಿಕಾರ ನಡೆಸುವ ಸಂದರ್ಭದಲ್ಲಿ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಜನರಿಗೆ ಎಂತಹ ಆಡಳಿತ ನೀಡಬಹುದು ಎಂಬುದನ್ನೂ ಅರಿತುಕೊಳ್ಳಬೇಕು. ಆದರೆ, ಅದನ್ನೇ ಮರೆತುಬಿಟ್ಟಿದ್ದಾರೆ” ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ಹೆದರಿಲ್ಲ :
ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದೆಹಲಿಯ ಪ್ರತಿಭಟನೆಗಳಿಗೆ ಕೇಂದ್ರ ಸರ್ಕಾರ ಹೆದರಿಲ್ಲ. ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ಹೇಳಿದರು.
ಕಾಕ್ರೋಚ್ ಪಾರ್ಟಿ ಹೆಸರಿನಲ್ಲಿ ನಡೆಯುತ್ತಿರುವ ಪ್ರದರ್ಶನಗಳು ಹೊಸದೇನಲ್ಲ. ಹಿಂದೆ ದೇಶದ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿದ್ದ, ದೇಶವನ್ನು ವಿಚ್ಛಿದ್ರಗೊಳಿಸುವ ಶಕ್ತಿಗಳೊಂದಿಗೆ ಹೋರಾಟ ನಡೆಸುತ್ತಿದ್ದ ಅನೇಕರು ಈ ಕಾಕ್ರೋಚ್ ಪಾರ್ಟಿಯ ಮುಖಂಡರೊಂದಿಗೆ ಸೇರಿದ್ದಾರೆ. ವಿದ್ಯಾರ್ಥಿಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದ್ದರು. ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಅರಾಜಕತೆ ಸೃಷ್ಟಿಸಲು ಹೊರಟಿದ್ದರು. ಇದೆಲ್ಲವನ್ನೂ ಕೇಂದ್ರ ಸರ್ಕಾರ ಗಮನಿಸಿತ್ತು ಎಂದು ಆಕ್ಷೇಪಿಸಿದರು.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ನಾವು ಏನೇ ಮಾಡಿದರೂ ಕೇಂದ್ರ ಸರ್ಕಾರ ತಲೆಬಾಗುತ್ತದೆ ಎಂಬ ಭಾವನೆ ಕೆಲವರಲ್ಲಿದೆ. ಈಗ ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅದು ಸಾಂವಿಧಾನಿಕ ಹುದ್ದೆ. ತಪ್ಪಾಗಿದ್ದರೆ ನ್ಯಾಯಾಲಯಕ್ಕೆ ಹೋಗಬಹುದು. ಆದರೆ, ಅವರು ನ್ಯಾಯಾಲಯದ ಮೊರೆ ಹೋಗಲು ಸಿದ್ಧರಿಲ್ಲ ಎಂದು ದೂರಿದರು.
ಫಾರಂ 7 ವಿಚಾರ ಸುಳ್ಳು :
ನೀವು ಹೇಳುತ್ತಿರುವ ಫಾರಂ 7 ವಿಚಾರ ಸುಳ್ಳಾಗಿದೆ. ಯಾರದ್ದೋ ಒಂದು ಶಿಫಾರಸಿನ ಮೇರೆಗೆ ಚುನಾವಣಾ ಆಯೋಗ ಯಾವುದೇ ವ್ಯಕ್ತಿಯ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿಲ್ಲ. ಇದುವರೆಗೂ ನನ್ನ ಹೆಸರು ತೆಗೆದುಹಾಕಿದ್ದಾರೆ ಎಂದು ಯಾರೂ ಬಂದು ಹೇಳಿಲ್ಲ. ಪ್ರಕಾಶ್ ರಾಜ್ ಅವರು ಕೂಡ ಈ ವಿಚಾರವಾಗಿ ಹೋರಾಟ ನಡೆಸಿ, ಎಸ್ಐಆರ್ ಮಾಡಬಾರದು ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಮರಣ ಹೊಂದಿದವರ ಹೆಸರು, ಸ್ಥಳಾಂತರಗೊಂಡವರ ಹೆಸರು ಮತದಾರರ ಪಟ್ಟಿಯಲ್ಲಿ ಮತ್ತೆ ಇರಬೇಕೆಂದು ಬಯಸುತ್ತೀರಾ? ದೇಶದ ಪ್ರಜೆಗಳಲ್ಲದವರ ಹೆಸರುಗಳೂ ಪಟ್ಟಿಯಲ್ಲಿದ್ದವು ಎಂಬುದನ್ನು ಗಮನಿಸಬೇಕು ಎಂದು ಹೇಳಿದರು.
ಕರ್ನಾಟಕದಲ್ಲೂ ಕಾಂಗ್ರೆಸ್ ಉಳಿಯುವುದಿಲ್ಲ :
ಈ ದೇಶವನ್ನು ಮುನ್ನಡೆಸುತ್ತಿರುವುದು ಬಾಬಾಸಾಹೇಬರು ರಚಿಸಿದ ಸಂವಿಧಾನ. ಇಡೀ ವಿಶ್ವವೇ ಗೌರವಿಸುವ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ದೇಶವನ್ನು ಮುನ್ನಡೆಸುತ್ತಿದ್ದಾರೆ. ಇದನ್ನು ಕಾಂಗ್ರೆಸ್ನವರು ನೋಡಿ ಕಲಿಯಬೇಕು. ಅಧಿಕಾರದ ಹಪಾಹಪಿಯಿಂದ ಕಾಂಗ್ರೆಸ್ ನಾಯಕತ್ವ ದುರ್ಬಲವಾಗಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಅಹಿಂದ ನಾಯಕರಾಗಿ ಗಟ್ಟಿಯಾಗಿ ಹಿಡಿತ ಸಾಧಿಸಿದ್ದರಿಂದ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಅವರೂ ಈಗ ಮೂಲೆಗುಂಪಾಗಿರುವುದರಿಂದ ರಾಜ್ಯದಲ್ಲೂ ಕಾಂಗ್ರೆಸ್ ಉಳಿಯುವುದಿಲ್ಲ ಎಂದು ಹೇಳಿದರು.
ರಾಹುಲ್ ಗಾಂಧಿ ಬಿಜೆಪಿಯ ಸ್ಟಾರ್ ಪ್ರಚಾರಕ :
ರಾಷ್ಟ್ರಮಟ್ಟದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿ ಅವರಿಗೆ ವಯಸ್ಸಾಗಿದೆ. ರಾಹುಲ್ ಗಾಂಧಿ ಅವರಂತೂ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದಾರೆ. ಕಾಂಗ್ರೆಸ್ಗೆ ಅವರಿಂದ ಪ್ರಯೋಜನವಿಲ್ಲ. ರಾಷ್ಟ್ರಮಟ್ಟದಲ್ಲಿ ನಾಯಕರಿಲ್ಲದೆ ಕಾಂಗ್ರೆಸ್ನ ಸ್ಥಿತಿ ಚಿಂತಾಜನಕವಾಗಿದೆ. ಮುಂದಿನ ಚುನಾವಣೆಯವರೆಗೆ ಪಕ್ಷ ಉಳಿಯುತ್ತದೆಯೇ ಎಂಬ ಗ್ಯಾರಂಟಿಯೂ ಇಲ್ಲ. ಅಸ್ತಿತ್ವವೇ ಇಲ್ಲದಂತಾಗಿರುವ ಕಾಂಗ್ರೆಸ್, ಕಾಕ್ರೋಚ್ ಪಾರ್ಟಿಯಲ್ಲಿ ವಿಲೀನವಾಗಬಹುದು ಎನಿಸುತ್ತದೆ ಎಂದು ವ್ಯಂಗ್ಯವಾಡಿದರು.
ಗೃಹ ಸಚಿವರಿಗೆ ಕಾನೂನಿನ ಪ್ರಜ್ಞೆ ಇರಬೇಕು :
ಸ್ಟಿಂಗ್ ಆಪರೇಷನ್ ಕುರಿತು ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಬಗ್ಗೆ ಕಾಂಗ್ರೆಸ್ನವರೇ ಮಾತನಾಡುತ್ತಿದ್ದಾರೆ. ಗೃಹ ಸಚಿವರಿಗೆ ಕಾನೂನಿನ ಪ್ರಜ್ಞೆ ಇರಬೇಕು. ಪೊಲೀಸ್ ಇಲಾಖೆಗೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸುವ ಅಧಿಕಾರವಿದೆ. ಸರ್ಕಾರಕ್ಕೆ ಯಾವೆಲ್ಲ ಅಧಿಕಾರಗಳಿವೆ ಎಂಬುದನ್ನು ಸಚಿವರು ತಿಳಿದುಕೊಳ್ಳಬೇಕು. ಮಾಧ್ಯಮಗಳು ತಮ್ಮ ಕರ್ತವ್ಯದ ಭಾಗವಾಗಿ ಸ್ಟಿಂಗ್ ಆಪರೇಷನ್ ಮಾಡುತ್ತವೆ. ಭ್ರಷ್ಟಾಚಾರ ಮಾಡದಿದ್ದರೆ ಯಾರಿಗೂ ಭಯವಿರುವುದಿಲ್ಲ. ಕಾಂಗ್ರೆಸ್ನವರಲ್ಲಿ ಹುಳುಕು ಇರುವುದರಿಂದಲೇ ಅವರು ಭಯಪಡುತ್ತಿದ್ದಾರೆ. ಕುಂಬಳಕಾಯಿ ಕಳ್ಳ ಎಂದಾಕ್ಷಣ ಹೆಗಲು ಮುಟ್ಟಿ ನೋಡಿಕೊಂಡಂತಾಗಿದೆ ಎಂದು ಟೀಕಿಸಿದರು.
ಸಿಎಂ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ :
ಸ್ಟಿಂಗ್ ಆಪರೇಷನ್ ವಿಚಾರವನ್ನು ಮುಖ್ಯಮಂತ್ರಿಗಳೇ ಏಕೆ ಬಹಿರಂಗಪಡಿಸಿದರು ಎಂದು ಪ್ರಶ್ನಿಸಿದ ಛಲವಾದಿ ನಾರಾಯಣಸ್ವಾಮಿ, “ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ತಮ್ಮದೇ ಪಕ್ಷದ ಶಾಸಕರು ಮತ್ತು ಸಚಿವರನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ನ ಹಳೆಯ ನೀತಿ” ಎಂದು ಆರೋಪಿಸಿದರು.
ಮಹಿಷ ದಸರಾ ಪ್ರಚಾರಕ್ಕಾಗಿ ನಡೆಸುವ ಕಾರ್ಯಕ್ರಮ :
ಮಹಿಷ ದಸರಾ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲವರು ಪ್ರಚಾರಕ್ಕಾಗಿ ಮಹಿಷ ದಸರಾ ಆಚರಿಸುತ್ತಾರೆ. ಸರ್ಕಾರಗಳು ಇಂತಹ ಕಾರ್ಯಕ್ರಮಗಳನ್ನು ತಡೆಯಬಹುದು. ಇಲ್ಲದಿದ್ದರೆ ಅದು ಪದ್ಧತಿಯಾಗಿ ಮುಂದುವರಿಯುತ್ತದೆ. ಮುಂದಿನ ದಿನಗಳಲ್ಲಿ ಇದರಿಂದ ಸಾಮಾಜಿಕವಾಗಿ ತೊಂದರೆಯಾಗಬಹುದು ಎಂಬುದನ್ನು ಅರಿತುಕೊಳ್ಳಬೇಕು. ಇದರ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡಬಾರದು ಎಂದು ಹೇಳಿದರು.






