‘ಹೋಂಡಾ ಕಂಪೆನಿ’ ರಾಜ್ಯದಲ್ಲೇ ಇರುತ್ತದೆ : ಸಚಿವ ಎಂ.ಬಿ.ಪಾಟೀಲ್

ಎಂ.ಬಿ.ಪಾಟೀಲ್
ಬೆಂಗಳೂರು : ಹೋಂಡಾ ಮೋಟಾರ್ಸ್ ಕಂಪೆನಿಯು ಕರ್ನಾಟಕ ರಾಜ್ಯವನ್ನು ತೊರೆದು ಬೇರೆಲ್ಲೊ ಹೋಗುತ್ತಿದೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಕಪೋಲಕಲ್ಪಿತ ಮತ್ತು ರಾಜಕೀಯ ದುರುದ್ದೇಶದಿಂದ ಕೂಡಿದೆ. ಇಂತಹ ಸಂವೇದನಾರಹಿತ ಹೇಳಿಕೆಗಳು ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಮಾರಕ ಎಂದು ಬೃಹತ್ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ರವಿವಾರ ಪ್ರಕಟಣೆ ನೀಡಿರುವ ಅವರು, ಹೋಂಡಾ ಮೋಟಾರ್ಸ್ ಕಂಪೆನಿಗೆ ಕೋಲಾರ ಜಿಲ್ಲೆಯ ನರಸಾಪುರದಲ್ಲಿ 135 ಎಕರೆ ಜಾಗವನ್ನು 2011ರಿಂದ ಹಂತ-ಹಂತವಾಗಿ ನೀಡಲಾಗಿದೆ. ಅಲ್ಲಿ, 2013ರಿಂದಲೂ ದ್ವಿಚಕ್ರ ವಾಹನಗಳನ್ನು ತಯಾರಿಸುತ್ತಿದ್ದು, ಸದ್ಯ ದಿನಕ್ಕೆ 10ಸಾವಿರ ವಾಹನಗಳ ಉತ್ಪಾದನೆ ಆಗುತ್ತಿವೆ. 7,800ಕ್ಕೂ ಹೆಚ್ಚಿನ ಉದ್ಯೋಗ ಸೃಷ್ಟಿ ಆಗಿದೆ ಎಂದು ಹೇಳಿದ್ದಾರೆ.
ಅಲ್ಲದೆ ದೊಡ್ಡಬಳ್ಳಾಪುರ ತಾಲೂಕಿನ ಆದಿನಾರಾಯಣ ಹೊಸಹಳ್ಳಿಯಲ್ಲಿ 35 ಎಕರೆ ಜಾಗದಲ್ಲಿ ಬಿಡಿ ಭಾಗಗಳ ದಾಸ್ತಾನು ಹಾಗೂ ಸರಬರಾಜು ಘಟಕ ಹೊಂದಿದ್ದು, ಇಡೀ ದಕ್ಷಿಣ ಭಾರತಕ್ಕೆ ಇಲ್ಲಿಂದ ಪೂರೈಕೆ ಮಾಡುತ್ತಿದೆ. ಹೀಗಾಗಿ ಕರ್ನಾಟಕ ರಾಜ್ಯದ ಜತೆ ಆ ಕಂಪೆನಿ ಉತ್ತಮ ಸಂಬಂಧ ಹೊಂದಿದೆ ಎಂಬುದನ್ನು ಕುಮಾರಸ್ವಾಮಿ ತಿಳಿದು ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಪಾಟೀಲ್ ತಿರುಗೇಟು ನೀಡಿದ್ದಾರೆ
ಹೋಂಡಾ ಕಂಪೆನಿಯು ಇ.ವಿ. ದ್ವಿಚಕ್ರ ವಾಹನ ತಯಾರಿಕೆಗೆ ಒಲವು ಹೊಂದಿದ್ದು, ಮುಂದಿನ ದಿನಗಳಲ್ಲಿ ನರಸಾಪುರದ ಕ್ಯಾಂಪಸ್ನಲ್ಲೇ ಅದನ್ನು ವಿಸ್ತರಿಸಲಿದೆ. ಹೋಂಡಾ ಕಂಪೆನಿಯ ವಿಚಾರದಲ್ಲಿ ಸರಕಾರದ ಕಡೆಯಿಂದ ಯಾವ ಲೋಪವೂ ಆಗಿಲ್ಲ. ಆ ಸಂಸ್ಥೆ ಆ ರೀತಿಯ ಅಭಿಪ್ರಾಯ ಹೊಂದಿಲ್ಲ. ಇಂತಹ ಸಂದರ್ಭಗಳಲ್ಲಿ ಕುಮಾರಸ್ವಾಮಿ ನಮ್ಮ ರಾಜ್ಯದವರೇ ಆಗಿ ಈ ರೀತಿ ಮಾತನಾಡುತ್ತಿರುವುದು ಸಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.
ವಾಸ್ತವದಲ್ಲಿ ಕುಮಾರಸ್ವಾಮಿ ಅವರೇ ರಾಜ್ಯಕ್ಕೆ ಹೆಚ್ಚಿನ ಉದ್ಯಮಗಳು ಬರುವಂತೆ ಮಾಡಬೇಕು. ಅದು ಬಿಟ್ಟು ಎಲ್ಲ ಕಂಪೆನಿಗಳು ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಒಡಿಶಾ ರಾಜ್ಯಗಳಿಗೆ ಹೋಗುತ್ತಿವೆ ಎಂದು ಹುಯಿಲೆಬ್ಬಿಸುವುದರಿಂದ ಅವರದೇ ರಾಜ್ಯದ ಹಿತಬಲಿ ಕೊಟ್ಟಂತಾಗುವುದಿಲ್ಲವೇ? ಎಂದು ಪಾಟೀಲ್ ಇದೇ ವೇಳೆ ಪ್ರಶ್ನಿಸಿದರು.






