ʼಹನಿಟ್ರ್ಯಾಪ್ʼ ಯತ್ನ ವಿಚಾರ: ಸಿಎಂ ಸಿದ್ದರಾಮಯ್ಯಗೆ ದಾಖಲೆ ನೀಡಿದ ರಾಜಣ್ಣ ಪುತ್ರ ರಾಜೇಂದ್ರ

ಬೆಂಗಳೂರು : ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿರುವ ʼಹನಿಟ್ರ್ಯಾಪ್ʼ ಯತ್ನ ಸಂಬಂಧ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಸಚಿವ ರಾಜಣ್ಣ ಅವರ ಪುತ್ರ ಪರಿಷತ್ ಸದಸ್ಯ ರಾಜೇಂದ್ರ ಅವರು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಯನ್ನು ನೀಡಿದರು.
ಬಳಿಕ ಮಾತನಾಡಿದ ರಾಜೇಂದ್ರ ಅವರು, ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ಸಿಎಂಗೆ ನೀಡಿದ್ದೇನೆ. ಡಿಜಿಗೆ ದೂರು ಕೊಡಲು ಸಿಎಂ ಸೂಚಿಸಿದ್ದಾರೆ. ಶೀಘ್ರದಲ್ಲೇ ಡಿಜಿ & ಐಜಿಪಿಗೆ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ.
ಕಳೆದ 3 ತಿಂಗಳಿಂದ ನನಗೆ ಹನಿಟ್ರ್ಯಾಪ್ ನಡೆಸಲು ಯತ್ನ ನಡೆಸಿದ್ದಾರೆ. ಹನಿಟ್ರ್ಯಾಪ್ ನಡೆಸಲು ನಮ್ಮ ಮಧುಗಿರಿ ನಿವಾಸಕ್ಕೂ ಬಂದಿದ್ದರು. ಬೆಂಗಳೂರಿನ ಸರ್ಕಾರಿ ನಿವಾಸಕ್ಕೂ ಬಂದು ಹನಿಟ್ರ್ಯಾಪ್‌ಗೆ ಯತ್ನಿಸಿದ್ದರು. ಯಾವ ಕಾರಣಕ್ಕಾಗಿ ನನಗೆ ಹನಿಟ್ರ್ಯಾಪ್‌ಗೆ ಯತ್ನಿಸಿದ್ದಾರೆಂದು ಗೊತ್ತಿಲ್ಲ. ಈ ಬಗ್ಗೆ ತನಿಖೆಯಾಗಲಿ, ಎಲ್ಲ ಹೊರಬರುತ್ತೆ ಎಂದು ರಾಜೇಂದ್ರ ಹೇಳಿದರು.
ಹನಿಟ್ರ್ಯಾಪ್ ಮಾಡಲು ಪ್ರಯತ್ನ ಮಾಡಿದ್ದಾರೆ, ಆದ್ರೆ ಹನಿಟ್ರ್ಯಾಪ್ ಆಗಿಲ್ಲ. ವೈಯಕ್ತಿಕವಾಗಿ ತೆಜೋವಧೆ ಮಾಡಲು ಹೀಗೆಲ್ಲ ಮಾಡ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.





