Hosur | ಕಟ್ಟಡ ಕಾಮಗಾರಿ ವೇಳೆ ನಡೆದ ದುರಂತದಲ್ಲಿ ಮೂವರು ಕಾರ್ಮಿಕರ ಮೃತ್ಯು

ಸಾಂದರ್ಭಿಕ ಚಿತ್ರ
ಬೆಂಗಳೂರು : ಕಾರ್ಖಾನೆಯ ಕಟ್ಟಡ ಕಾಮಗಾರಿ ವೇಳೆ ನಡೆದ ದುರಂತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆಂಗಳೂರು-ತಮಿಳುನಾಡಿನ ಗಡಿಭಾಗವಾದ ಹೊಸೂರಿನ ಸಿಪ್ಕಾಟ್ ಬಳಿ ನಡೆದಿದೆ. ಅವಘಡದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ತೆಮಿಳುನಾಡು ಮೂಲದ ಕುಮರೇಶನ್(39), ಮೈಕೆಲ್(26) ಮತ್ತು ಶ್ರೀನಿವಾಸನ್(26) ಮೃತರು. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಖಾಸಗಿ ಕಾರ್ಖಾನೆಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಕಾರ್ಮಿಕರು ಮೋಲ್ಡ್ ಗೆ ಕಾಂಕ್ರೀಟ್ ಹಾಕುತ್ತಿದ್ದ ವೇಳೆ ಮರದ ದಿಮ್ಮಿಗಳು ಏಕಾಏಕಿ ಕುಸಿದಿವೆ. ಪರಿಣಾಮ ಕಟ್ಟಡದ ಅವಶೇಷಗಳಡಿ ಸಿಲುಕಿ ಮೂವರು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ದಿನೇಶ್ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕಾಮಗಾರಿ ವೇಳೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯವಹಿಸಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಅವಶೇಷಗಳ ಅಡಿ ಸಿಲುಕಿದ್ದ ಕಾರ್ಮಿಕರ ಮೃತದೇಹಗಳನ್ನು ಕ್ರೇನ್ ಬಳಸಿ ಹೊರಕ್ಕೆ ತೆಗೆಯಲಾಗಿದೆ.
ಕಾಂಕ್ರೀಟ್ನ ಭಾರವನ್ನು ತಡೆದುಕೊಳ್ಳಲು ಅಗತ್ಯವಾದ ಕಂಬಗಳು ಅಥವಾ ಸೂಕ್ತ ಯೋಜನೆ ಇರಲಿಲ್ಲ ಎಂದು ಪ್ರಾಥಮಿಕ ಪರಿಶೀಲನೆಯಲ್ಲಿ ತಿಳಿದುಬಂದಿದೆ. ಹೀಗಾಗಿ, ಕಟ್ಟಡದ ವಿನ್ಯಾಸ ರೂಪಿಸಿದ ಎಂಜಿನಿಯರ್ ಸೇರಿದಂತೆ ಕಾಮಗಾರಿಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೊಸೂರು ಉಪ ಪೊಲೀಸ್ ವರಿಷ್ಠಾಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.






