ಕಾರ್ಮಿಕರಿಗೆ ಕೈಗಾರಿಕೆಗಳ ಸಮೀಪದಲ್ಲೇ ವಸತಿ ಸೌಲಭ್ಯ : ಸಚಿವ ಎಂ.ಬಿ.ಪಾಟೀಲ್
ʼಶ್ರಮಿಕ್ ನಿವಾಸʼ ಯೋಜನೆಗೆ ಚಾಲನೆ; ಮೊದಲ ಹಂತದಲ್ಲಿ 30 ಸಾವಿರ ಮನೆ ನಿರ್ಮಿಸುವ ಗುರಿ

ಎಂ.ಬಿ.ಪಾಟೀಲ್
ಬೆಂಗಳೂರು: ತಯಾರಿಕಾ ವಲಯದಲ್ಲಿ ಶ್ರಮದಿಂದ ದುಡಿಯುವ ಉದ್ಯೋಗಿಗಳಿಗೆ ತಾವು ಕೆಲಸ ಮಾಡುವ ಕೈಗಾರಿಕೆಗಳ ಸಮೀಪದಲ್ಲೇ ಗುಣಮಟ್ಟದ ವಸತಿ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಶ್ರಮಿಕ್ ನಿವಾಸ’ ನೀತಿಯನ್ನು ಜಾರಿಗೆ ತಂದಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಯೋಜನೆಯ ನೀತಿಯನ್ನು ಗುರುವಾರ (ನ.12) ಅನಾವರಣಗೊಳಿಸಿದ್ದಾರೆ.
ಈ ಕುರಿತು ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಶ್ರಮದ ಕೆಲಸ ಮಾಡುವ ಉದ್ಯೋಗಿಗಳಿಗೆ ನೆಮ್ಮದಿಯ ಸೂರು ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ. ಇದರಿಂದ ಅವರು ಪ್ರತಿದಿನ ಬೇರೆ ಬೇರೆ ಊರುಗಳಿಂದ ಕೆಲಸದ ಸ್ಥಳಕ್ಕೆ ಸಂಚರಿಸುವ ತೊಂದರೆ ತಪ್ಪಲಿದೆ. ಜೊತೆಗೆ ಉತ್ಪಾದಕತೆಯೂ ಹೆಚ್ಚಲಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಹೊಂದಿರುವ ಕೈಗಾರಿಕೆಗಳ ಸಮೀಪದಲ್ಲೇ ಡಾರ್ಮಿಟರಿ, ಒಂದು ಕೊಠಡಿಯ ಮನೆ ಹಾಗೂ ಎರಡು ಕೊಠಡಿಗಳ ಮನೆಗಳನ್ನು ನಿರ್ಮಿಸಿ, ಕೈಗೆಟುಕುವ ಬಾಡಿಗೆ ದರದಲ್ಲಿ ಅಥವಾ ಉಚಿತವಾಗಿ ವಾಸಕ್ಕೆ ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯದ ಕೈಗಾರಿಕಾ ಪ್ರದೇಶಗಳು ಬೃಹತ್ ಹೂಡಿಕೆಗೆ ಅನುಕೂಲವಾಗುವ ಹಾಗೂ ಆಕರ್ಷಕ ಸೌಲಭ್ಯಗಳನ್ನು ಹೊಂದಿರಬೇಕು ಎಂಬುದು ಸರ್ಕಾರದ ಆಶಯವಾಗಿದೆ. ‘ಶ್ರಮಿಕ್ ನಿವಾಸ್’ ಯೋಜನೆಯಡಿ ಮೊದಲ ಹಂತದಲ್ಲಿ 30 ಸಾವಿರ ಮನೆಗಳನ್ನು ನಿರ್ಮಿಸಲಾಗುವುದು. 100 ಉದ್ಯೋಗಿಗಳಿಗೆ ವಸತಿ ಸೌಕರ್ಯ ಕಲ್ಪಿಸಿದರೆ ಒಂದು ಕೋಟಿ ರೂ. ಸಬ್ಸಿಡಿ ನೀಡಲಾಗುವುದು. ಇದೇ ರೀತಿ 1,000 ಉದ್ಯೋಗಿಗಳಿಗೆ ವಸತಿ ಒದಗಿಸಿದರೆ 10 ಕೋಟಿ ರೂ. ಹಾಗೂ 2,500 ಕಾರ್ಮಿಕರಿಗೆ ವಸತಿ ಕಲ್ಪಿಸಿದರೆ ಗರಿಷ್ಠ 25 ಕೋಟಿ ರೂ. ಸಬ್ಸಿಡಿ ನೀಡಲಾಗುವುದು. ಬೃಹತ್ ಕೈಗಾರಿಕೆಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
‘ಶ್ರಮಿಕ್ ನಿವಾಸ’ ಯೋಜನೆ ವಿನೂತನ ಪರಿಕಲ್ಪನೆಯಾಗಿದೆ. ಇದರಡಿ ಗರಿಷ್ಠ 10 ಚದರ ಮೀಟರ್ ವಿಸ್ತೀರ್ಣದ ಡಾರ್ಮಿಟರಿ, ಗರಿಷ್ಠ 30 ಚದರ ಮೀಟರ್ ವಿಸ್ತೀರ್ಣದ ಸಿಂಗಲ್ ಬೆಡ್ರೂಮ್ ಹಾಗೂ ಗರಿಷ್ಠ 60 ಚದರ ಮೀಟರ್ ವಿಸ್ತೀರ್ಣದ ಡಬಲ್ ಬೆಡ್ರೂಮ್ ಮನೆಗಳನ್ನು ನಿರ್ಮಿಸಲು ಅವಕಾಶವಿದೆ. ಆದರೆ, ಉದ್ಯಮಿಗಳು ಕೆಐಎಡಿಬಿ ಮೂಲಕ ತಮಗೆ ಮಂಜೂರಾಗಿರುವ ನಿವೇಶನದ ಒಳಗಡೆಯೇ ಇವುಗಳನ್ನು ನಿರ್ಮಿಸುವುದು ಕಡ್ಡಾಯವಾಗಿದೆ ಎಂದು ಮಾಹಿತಿ ನೀಡಿದರು.
ಡಾರ್ಮಿಟರಿಗಳಲ್ಲಿ ಉದ್ಯೋಗಿಗಳಿಗೆ ಹಾಸಿಗೆ, ಟೇಬಲ್, ಕಪಾಟು, ಲಾಕರ್ಗಳು, ಸಾಮೂಹಿಕ ಅಡುಗೆಮನೆ ಹಾಗೂ ಶೌಚಾಲಯಗಳ ವ್ಯವಸ್ಥೆ ಇರಲಿದೆ. ಸಿಂಗಲ್ ಮತ್ತು ಡಬಲ್ ಬೆಡ್ರೂಮ್ ಮನೆಗಳಲ್ಲಿ ಪಡಸಾಲೆ (ಲಿವಿಂಗ್ ರೂಮ್), ಅಡುಗೆಮನೆ, ಸ್ನಾನದ ಮನೆ ಹಾಗೂ ಶೌಚಾಲಯದ ಸೌಲಭ್ಯ ಕಲ್ಪಿಸಲಾಗುವುದು. ಜತೆಗೆ ಕೈಗಾರಿಕೆಗಳಿಗೆ ಅನ್ವಯವಾಗುವ ದರದಲ್ಲೇ ನೀರು ಮತ್ತು ವಿದ್ಯುತ್ ಪೂರೈಸಲಾಗುವುದು. ಈ ಮನೆಗಳಲ್ಲಿ ಉದ್ಯೋಗಿಗಳು ವಾಸಿಸಲು ಆರಂಭಿಸಿದ ದಿನದಿಂದ ಅನ್ವಯವಾಗುವಂತೆ ಸಬ್ಸಿಡಿ ಮೊತ್ತವನ್ನು ಮೂರು ವರ್ಷಗಳಲ್ಲಿ ಮೂರು ಸಮಾನ ಕಂತುಗಳಲ್ಲಿ ನೀಡಲಾಗುವುದು ಎಂದರು.
ಈ ಯೋಜನೆಯಡಿ ಪ್ರತಿ ವರ್ಷ ಗರಿಷ್ಠ 10 ಸಾವಿರ ಕಾರ್ಮಿಕರಿಗೆ ವಸತಿ ಸೌಕರ್ಯ ಒದಗಿಸುವ ಗುರಿ ಹೊಂದಲಾಗಿದೆ. ಇದಕ್ಕಿಂತ ಹೆಚ್ಚಿನ ಸಂಖ್ಯೆಯ ಕಾರ್ಮಿಕರ ಕೋರಿಕೆಗಳನ್ನು ಮುಂದಿನ ವರ್ಷ ಪರಿಗಣಿಸಲಾಗುವುದು. ಯೋಜನೆಯಡಿ ಕಂಪನಿಗಳ ಕಾಯಂ ಉದ್ಯೋಗಿಗಳು ಮಾತ್ರ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಉದ್ಯೋಗಿಗಳ ಅವಲಂಬಿತರಿಗೆ ಈ ಸೌಲಭ್ಯ ಅನ್ವಯಿಸುವುದಿಲ್ಲ. ಒಂದು ಕಂಪನಿಗೆ ಗರಿಷ್ಠ 25 ಕೋಟಿ ರೂ.ವರೆಗೆ ಸಬ್ಸಿಡಿ ನೀಡಲಾಗುವುದು ಎಂದು ಪಾಟೀಲ ತಿಳಿಸಿದರು.
ಕಾರ್ಮಿಕರಿಗೆ ನೆಮ್ಮದಿಯ ಸೂರು ನಮ್ಮ ಆಶಯ
“ಕಾರ್ಮಿಕರು ಕೈಗಾರಿಕೆಗಳ ಅವಿಭಾಜ್ಯ ಅಂಗ. ಪರಿಶ್ರಮದಿಂದ ದುಡಿಯುವವರು ನೆಮ್ಮದಿಯಿಂದ ಇರಬೇಕು ಎಂಬುದು ನಮ್ಮ ಸದಾಶಯ. ವಸತಿ ಸೌಲಭ್ಯದಿಂದ ಕಾರ್ಮಿಕರ ಅನಗತ್ಯ ಓಡಾಟ ತಪ್ಪಿ, ಕೈಗಾರಿಕೆಗಳ ಉತ್ಪಾದಕತೆಯೂ ಹೆಚ್ಚಲಿದೆ. ಇದರಿಂದ ರಾಜ್ಯದ ಆರ್ಥಿಕತೆಗೆ ಅನುಕೂಲವಾಗಲಿದೆ. ಈ ಉದ್ದೇಶದಿಂದಲೇ ಶ್ರಮಿಕ್ ನಿವಾಸ ಯೋಜನೆಯನ್ನು ಜಾರಿಗೆ ತಂದಿದ್ದೇವೆ.”
-ಎಂ.ಬಿ. ಪಾಟೀಲ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ






