ಪುಲ್ವಾಮಾಕ್ಕೆ ಆರ್‌ಡಿಎಕ್ಸ್ ಹೇಗೆ ಬಂತು, ತನಿಖೆ ಎಲ್ಲಿಗೆ ಬಂತು : ಸಚಿವ ಕೃಷ್ಣಭೈರೇಗೌಡ ಪ್ರಶ್ನೆ

ಬೆಂಗಳೂರು : ‘ಐದು ವರ್ಷಗಳ ಹಿಂದೆ ಪುಲ್ವಾಮಾದಲ್ಲಿ ಜೀವ ಚೆಲ್ಲಿದ 40 ಭಾರತೀಯ ಸೈನಿಕರ ಹತ್ಯೆಗೆ ಕಾರಣ ಯಾರು? ಈ ಕೃತ್ಯಕ್ಕೆ ಬಳಸಿದ ಆರ್‌ಡಿಎಕ್ಸ್ ಎಲ್ಲಿಂದ ಬಂತು? ತನಿಖೆ ಎಲ್ಲಿಗೆ ಬಂದು ನಿಂತಿದೆ?’ ಎಂದು ಕೇಂದ್ರ ಸರಕಾರಕ್ಕೆ, ಕಂದಾಯ ಸಚಿವ ಕೃಷ್ಣಭೈರೇಗೌಡ ಖಾರವಾಗಿ ಪ್ರಶ್ನಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ‘ಘೋಷಣೆ ಗೊಂದಲ’ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್, ಕೇಂದ್ರ ಸರಕಾರ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಯಾವ ಪಕ್ಷ? ದೇಶ ಒಡೆದದ್ದು ಯಾರು? ಎಂದು ಕೇಳಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಕೃಷ್ಣಭೈರೇಗೌಡ, ‘ನಮ್ಮ ದೇಶದ 40 ಜನ ಸೈನಿಕರ ಸಾವಿಗೆ ಕಾರಣ ಯಾರು ಎಂಬುದನ್ನು ಜನರ ಮುಂದೆ ಹೇಳಲಾಗದ, ಪ್ರಕರಣದ ತನಿಖೆ ನಡೆಸುವ ಯೋಗ್ಯತೆಯೂ ಇಲ್ಲದ ಅಯೋಗ್ಯರು ಬಿಜೆಪಿಗರು. ಇವರಿಗೆ ದೇಶಕ್ಕೆ ಬೆಂಕಿ ಇಟ್ಟು ಮತ ಹಾಕಿಸಿಕೊಳ್ಳುವುದನ್ನು ಬಿಟ್ಟು ಬೇರೇನು ಮಾಡಿದ್ದಾರೆ?’ ಎಂದು ಆಕ್ರೋಶ ಹೊರಹಾಕಿದರು.
‘ಬಿಜೆಪಿಗರು ಸದನದಲ್ಲಿ ವಾಸ್ತವಕ್ಕೆ ಹತ್ತಿರವಾದ ವಿಚಾರದ ಬಗ್ಗೆ ಮಾತನಾಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಬರೀ ಸುಳ್ಳು ಮತ್ತು ಕಟ್ಟುಕಥೆಗಳಿಂದ ಕೂಡಿದ ಅವರ ಮಾತಿಗೆ ಸದನದಲ್ಲಿ ಅವಕಾಶ ನೀಡಬೇಡಿ. ಸುನೀಲ್ ಕುಮಾರ್ ಅವರು ಉದ್ದೇಶಪೂರ್ವಕವಾಗಿ ಪ್ರಚೋದನಾತ್ಮಕ ಮಾತುಗಳನ್ನಾಡುತ್ತಿದ್ದಾರೆ’ ಎಂದು ಅವರು ದೂರಿದರು.
‘ನಾವು ತಾಳ್ಮೆಯಿಂದ ಇದ್ದೇವೆಂಬ ಕಾರಣಕ್ಕೆ ವಾಸ್ತವ ಬಿಟ್ಟು ಪ್ರಚೋದನೆಯ ಮಾತುಗಳನ್ನಾಡುತ್ತಿದ್ದಾರೆ. ನಮ್ಮ ತಾಳ್ಮೆ ಪರೀಕ್ಷೆ ಮಾಡುವುದೇ ಅವರ ಉದ್ದೇಶವಾಗಿದೆ. ದೇಶದ ವಿಭಜನೆಗೆ ಯಾರು ಕಾರಣ? ಎಂಬ ಬಗ್ಗೆ ಚರ್ಚಿಸಲು ನಾವು ಸಿದ್ದರಿದ್ದೇವೆ. ಆದರೆ, ಇಂದು ಅವರು ಅಸಲಿ ವಿಚಾರದ ಬಗ್ಗೆ ಮಾತನಾಡಲಿ. ವಿಷಯಾಂತರ ಬೇಡ’ ಎಂದು ಕೃಷ್ಣಬೈರೇಗೌಡ ಮನವಿ ಮಾಡಿದರು.







