ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣ ಸಿಐಡಿಗೆ ನೀಡಲು ಚಿಂತನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್

ಡಾ.ಜಿ.ಪರಮೇಶ್ವರ್
ಬೆಂಗಳೂರು : ಹುಬ್ಬಳ್ಳಿಯಲ್ಲಿ ನಡೆದ ಮಹಿಳೆ ವಿವಸ್ತ್ರ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದ್ದು, ಮುಖ್ಯಮಂತ್ರಿಗಳ ಅನುಮತಿ ಪಡೆದು ಸಿಐಡಿಗೆ ವಹಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ತಿಳಿಸಿದರು.
ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯ ಸತ್ಯಾಸತ್ಯತೆಯನ್ನು ಸಿಐಡಿಯವರು ತನಿಖೆ ಮಾಡಿ ಸರ್ಕಾರಕ್ಕೆ ವರದಿ ಕೊಡಬೇಕು. ಆನಂತರ ಸರ್ಕಾರ, ಯಾರು ತಪ್ಪಿತಸ್ಥರು, ಘಟನೆಯಲ್ಲಿ ಯಾರ ನಿರ್ಲಕ್ಷ್ಯ ಇದೆ ಎಲ್ಲವನ್ನು ಪರಿಗಣಿಸಿ ಮುಂದಿನ ತೀರ್ಮಾನ ಮಾಡಲಿದೆ ಎಂದು ಹೇಳಿದರು.
ಮಹಿಳೆ ವಿವಸ್ತ್ರ ಆಗುವುದಕ್ಕೆ ಪೊಲೀಸರು ಬಿಟ್ಟಿಲ್ಲ. ಪೊಲೀಸರು ಕೂಡಲೇ ಕ್ರಮ ವಹಿಸಿದ್ದಾರೆ. ಪೊಲೀಸರು ವಿವಸ್ತ್ರಗೊಳಿಸಿಲ್ಲ, ಆಕೆಯೇ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಇನ್ನೂ ಕೂಡ ವಿವರವಾಗಿ ತನಿಖೆ ಮಾಡಬೇಕು ಎಂದು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಸ್ಪಷ್ಟವಾಗಿ ಗೊತ್ತಾಗಬೇಕಾದರೆ ತನಿಖೆಯಾಗಬೇಕು ಎಂದರು.
ಡಿ.ಕೆ.ಶಿವಕುಮಾರ್ ಜವಾಬ್ದಾರಿಯುತ ಸಚಿವರು ಮತ್ತು ಉಪ ಮುಖ್ಯಮಂತ್ರಿಗಳು. ಕುಮಾರಸ್ವಾಮಿ ಹೇಳುವ ಪ್ರಕಾರ ಹೆಚ್ಚಿನ ಅಧಿಕಾರ ಇಲ್ಲ ಎಂಬುದು ಸಂವಿಧಾನಾತ್ಮಕವಾಗಿ ಸರಿ ಇರಬಹುದು. ಆದರೆ, ಸರ್ಕಾರದ ಪ್ರತಿನಿಧಿಯಾಗಿ ಡಿ.ಕೆ.ಶಿವಕುಮಾರ್ ಅಲ್ಲಿಗೆ ಹೋಗಿರುವುದನ್ನು ತಪ್ಪು ಎಂದು ಹೇಳುವುದು ಸರಿಯಲ್ಲ. ಡಿ.ಕೆ.ಶಿವಕುಮಾರ್ ಅವರಿಗೆ ಡೆಪ್ಯೂಟಿ ಚೀಫ್ ಮಿನಿಸ್ಟರ್ ಎಂದು ಪ್ರಮಾಣ ವಚನ ಕೊಟ್ಟಿದ್ದಾರೆ. ನಾನು ಹೋಗುವುದಕ್ಕೆ ಆಗಿಲ್ಲ. ಆ ಜವಾಬ್ದಾರಿಯಿಂದ ಅವರು ಹೋಗಿದ್ದಾರೆ ಎಂದು ಹೇಳಿದರು.
ಉಪಮುಖ್ಯಮಂತ್ರಿಯಾಗಿ, ಸಚಿವರಾಗಿ, ಸರ್ಕಾರದ ಪ್ರತಿನಿಧಿಯಾಗಿ ಡಿ.ಕೆ.ಶಿವಕುಮಾರ್ ಅವರು ಅಲ್ಲಿಗೆ ಹೋಗಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಮೃತ ಕುಟುಂಬಸ್ಥರನ್ನು ಭೇಟಿ ಮಾಡಿ, ಸಾಂತ್ವಾನ ಹೇಳಿದ್ದಾರೆ. ಇದು ತಪ್ಪು ಎನ್ನುವುದಾದರೆ ಏನು ಹೇಳಬೇಕು. ಸರ್ಕಾರದ ಪ್ರತಿನಿಧಿಯಾಗಿ ಭೇಟಿ ನೀಡಲು ಯಾರ ಅನುಮತಿ ಬೇಕು ಎಂದು ಅವರು ಪ್ರಶ್ನಿಸಿದರು.
ಇದುವರೆಗೂ ನಮ್ಮ ತೀರ್ಮಾನಗಳಲ್ಲಿ ಯಾರು ಕೂಡ ಇಲ್ಲಿವರೆಗೆ ಹಸ್ತಕ್ಷೇಪ ಮಾಡಿಲ್ಲ. ಮುಖ್ಯಮಂತ್ರಿಗಳು ಮತ್ತು ನಾನು ಒಟ್ಟಾಗಿ ಚರ್ಚಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ. ಹುಬ್ಬಳ್ಳಿ ಪ್ರಕರಣವನ್ನು ಸಿಐಡಿಗೆ ವಹಿಸುತ್ತೇನೆ ಎಂದು ನಾನು ನೇರವಾಗಿ ಹೇಳಬಹುದಿತ್ತು. ಆದರೆ, ಸಿಎಂ ಗಮನಕ್ಕೆ ತರದೇ ಇಂತಹ ತೀರ್ಮಾನಗಳನ್ನು ಮಾಡಲಾಗುತ್ತದೆಯೇ? ಎಂದರು
ಕೇಂದ್ರ ಸರ್ಕಾರ ನರೇಗಾ ಯೋಜನೆಯಲ್ಲಿ ತರುತ್ತಿರುವ ಬದಲಾವಣೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, "ಹೆಸರು ಬದಲಾವಣೆ ಮಾಡುವುದು ಮಹಾತ್ಮ ಗಾಂಧೀಜಿಯವರಿಗೆ ಮಾಡುವ ಅಪಮಾನ. ಅಧಿಕಾರ ವಿಕೇಂದ್ರಿಕರಣದ ಮೂಲಕ ಪಂಚಾಯಿತಿಗಳಿಗೆ ನೀಡಿದ್ದ ಶಕ್ತಿಯನ್ನು ಕೇಂದ್ರ ಸರ್ಕಾರ ಕಸಿದುಕೊಳ್ಳುತ್ತಿದೆ. ಪ್ರತಿ ಹಳ್ಳಿಗಳಲ್ಲಿ ಉದ್ಯೋಗ ನೀಡಲು ತೊಂದರೆಯಾಗಲಿದ್ದು, ಹಣದ ತೀರ್ಮಾನ ದೆಹಲಿಯಲ್ಲಿ ಆಗುವುದು ಸರಿಯಲ್ಲ. ಈ ಬಗ್ಗೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಜನರ ಮುಂದೆ ಸತ್ಯ ಇಡುತ್ತೇವೆ," ಎಂದು ಎಚ್ಚರಿಸಿದರು.
ಬಳ್ಳಾರಿ ವಲಯ ಐಜಿಪಿ ವರ್ಗಾವಣೆ ಕುರಿತು ಮಾತನಾಡಿದ ಅವರು, ವರ್ಗಾವಣೆ ಪ್ರಕ್ರಿಯೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಮಾಡುತ್ತದೆ. ಕಡತಕ್ಕೆ ಸಹಿ ಹಾಕಿ ನಿರ್ದೇಶನ ನೀಡುವವರು ಮುಖ್ಯಮಂತ್ರಿಗಳೇ ಆಗಿರುತ್ತಾರೆ ಎಂದು ಸ್ಪಷ್ಟಪಡಿಸಿದರು.







