ಮಾನವ-ವನ್ಯಜೀವಿ ಸಂಘರ್ಷ; ಇಲಾಖೆಗಳ ಜವಾಬ್ದಾರಿ ನಿಗದಿಪಡಿಸಿದ ಸರಕಾರದ ಸುತ್ತೋಲೆ

ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ವಿವಿಧ ಇಲಾಖೆಗಳ ಜವಾಬ್ದಾರಿಗಳನ್ನು ಸ್ಪಷ್ಟಪಡಿಸಿ, ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ.
ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸುತ್ತೋಲೆ ಹೊರಡಿಸಿದ್ದು, ಮಾನವ ಜೀವಹಾನಿ ಸಂಭವಿಸಿದ ಸಂದರ್ಭ ಹಾಗೂ ವನ್ಯಪ್ರಾಣಿಗಳ ರಕ್ಷಣಾ-ಪುನರ್ವಸತಿ ಕಾರ್ಯಾಚರಣೆಗಳಲ್ಲಿ ಅರಣ್ಯ, ಕಂದಾಯ, ಪೊಲೀಸ್, ಆರೋಗ್ಯ, ಪಶುವೈದ್ಯ, ಪಂಚಾಯತ್ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ.
ಮಾನವ-ವನ್ಯಜೀವಿ ಸಂಘರ್ಷ ಪ್ರಕರಣಗಳ ನಿರ್ವಹಣೆಯಲ್ಲಿ ಏಕರೂಪತೆ ಹಾಗೂ ಅಧಿಕಾರಿಗಳ ಜವಾಬ್ದಾರಿಗಳನ್ನು ಸ್ಪಷ್ಟವಾಗಿ ನಿಗದಿಪಡಿಸಿದ್ದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಸೇರಿದಂತೆ ರಾಜ್ಯದ ವಿವಿಧೆಡೆ ನಡೆದ ಮಾನವ-ವನ್ಯಜೀವಿ ಸಂಘರ್ಷ ಘಟನೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮಾನವ ಸಾವಿನ ಪ್ರಕರಣಗಳಲ್ಲಿ ಕಂದಾಯ ಇಲಾಖೆ ಸ್ಥಳದಲ್ಲೇ ಹಾಜರಿದ್ದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.
ತಹಶೀಲ್ದಾರ್ ಮತ್ತು ಸಹಾಯಕ ಆಯುಕ್ತರು ತಮ್ಮ ವ್ಯಾಪ್ತಿಯ ಅಧಿಕಾರವನ್ನು ಬಳಸಿಕೊಂಡು ಅಗತ್ಯ ಆದೇಶಗಳನ್ನು ಹೊರಡಿಸಬೇಕು. ಮೃತರ ಕಾನೂನುಬದ್ಧ ವಾರಸುದಾರರನ್ನು ಗುರುತಿಸಿ, ಅರಣ್ಯ ಇಲಾಖೆಯಿಂದ ನೀಡಲಾಗುವ ಪರಿಹಾರಧನವನ್ನು ಅವರಿಗೆ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.
ಪೊಲೀಸ್ ಇಲಾಖೆಗೆ ಜವಾಬ್ದಾರಿ: ಮಾನವ ಸಾವಿನ ಪ್ರಕರಣಗಳಲ್ಲಿ ಪೊಲೀಸರು ಎಫ್‍ಐಆರ್ ಅಥವಾ ಯುಡಿಆರ್ ದಾಖಲಿಸಿ, ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಬೇಕು. ಸ್ಥಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಜನಸಂದಣಿ ನಿಯಂತ್ರಿಸುವುದು ಹಾಗೂ ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ವನ್ಯಜೀವಿಗಳ ದಾಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂರಕ್ಷಿಸಲು ಅರಣ್ಯ ಇಲಾಖೆ ಮತ್ತು ವಿಧಿವಿಜ್ಞಾನ ಅಧಿಕಾರಿಗಳಿಗೆ ಪೊಲೀಸರು ಸಹಕರಿಸಬೇಕು. ಮೃತದೇಹ ಹಾಗೂ ಘಟನಾ ಸ್ಥಳದ ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಸಂಗ್ರಹಿಸುವ ವ್ಯವಸ್ಥೆ ಮಾಡಬೇಕು. ವನ್ಯಪ್ರಾಣಿಗಳ ದಾಳಿ ನಡೆದಿದೆ ಎಂಬ ಮೇಲ್ನೋಟದ ಸಾಕ್ಷ್ಯವಿದ್ದಲ್ಲಿ, ಸರಕಾರದ ಮಾನದಂಡಗಳಂತೆ ಪರಿಹಾರದ ಚೆಕ್ ಸಿದ್ಧಪಡಿಸಿ ತಹಶೀಲ್ದಾರ್‍ಗೆ ಲಭ್ಯವಾಗುವಂತೆ ಮಾಡುವುದು ಅರಣ್ಯ ಇಲಾಖೆ ಜವಾಬ್ದಾರಿ ಎಂದು ಉಲ್ಲೇಖಿಸಲಾಗಿದೆ.






