ಮಗನನ್ನು ಬಿಡುಗಡೆ ಮಾಡದಿದ್ದರೆ ಉಪವಾಸ ಸತ್ಯಾಗ್ರಹ: ಕರವೇ ನಾರಾಯಣಗೌಡರ ತಾಯಿ ಎಚ್ಚರಿಕೆ

ಬೆಂಗಳೂರು: ಕನ್ನಡ ನಾಡು-ನುಡಿಗಾಗಿ ಹೋರಾಡುತ್ತಿರುವ ನನ್ನ ಮಗ ಟಿ.ಎ. ನಾರಾಯಣಗೌಡ ಅವರನ್ನು ತಕ್ಷಣ ಬಿಡುಗಡೆ ಮಾಡದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನೆ ಮುಂದೆ ಅನ್ನ, ನೀರು ತ್ಯಜಿಸಿ ಆಮರಣಾಂತ ಸತ್ಯಾಗ್ರಹ ನಡೆಸುತ್ತೇನೆ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ತಾಯಿ ಗೌರಮ್ಮ ಎಚ್ಚರಿಕೆ ನೀಡಿದ್ದಾರೆ.
ನಾಮಫಲಕಗಳಲ್ಲಿ ಕನ್ನಡ ಬಳಕೆಗೆ ಆಗ್ರಹಿಸಿ ಹೋರಾಟ ನಡೆಸಿದ್ದ ನಾರಾಯಣಗೌಡರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಹಿನ್ನೆಲೆಯಲ್ಲಿ ಗೌರಮ್ಮ ಅವರು ತಮ್ಮ ಅಳಲು ತೋಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ʼನನ್ನ ಮಗ ಏನು ತಪ್ಪು ಮಾಡಿದ್ದ ಎಂದು ಜೈಲಿಗೆ ಹಾಕಿದ್ದೀರಿʼ ಎಂದು ಸರಕಾರವನ್ನು ಗೌರಮ್ಮ ಪ್ರಶ್ನಿಸಿದ್ದು, ನನ್ನ ಮಗನ ಆರೋಗ್ಯ ಸರಿಯಿಲ್ಲ. ಮಾತನಾಡಲೂ ತ್ರಾಣವಿಲ್ಲದಷ್ಟು ಸುಸ್ತಾಗಿದ್ದರು. ಆದರೂ ಕನ್ನಡಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಅದೇ ತಪ್ಪೇ. ದರೋಡೆ, ಕಳ್ಳತನ ಮಾಡಿದ್ದಾರೆಯೇ, ಯಾವ ಕಾರಣಕ್ಕೆ ಜೈಲಿನಟ್ಟಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿ.28ರಂದು ನಮ್ಮ ಕುಟುಂಬದ ಸದಸ್ಯರು ನಾರಾಯಣಗೌಡರಿಗೆ ಕೊಡಲು ಊಟ ಮತ್ತು ಮಾತ್ರೆಯನ್ನು ತೆಗೆದುಕೊಂಡು ಹೋಗಿದ್ದರು. ಆದರೆ ಜೈಲಿನ ಅಧಿಕಾರಿಗಳು ಅದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ನನ್ನ ಮಗ ಊಟ ಇಲ್ಲದೆ, ಜೈಲಿನಲ್ಲಿರಬೇಕಾದರೆ ಹೆತ್ತ ಕರಳು ಎಷ್ಟು ಸಂಕಟ ಪಡುತ್ತದೆ ಎಂದು ನಿಮಗೆ ಗೊತ್ತಾಗುತ್ತದೆಯೇ ಎಂದು ಗೌರಮ್ಮ ಅಳಲು ತೋಡಿಕೊಂಡಿದ್ದಾರೆ.
ನನ್ನ ಮಗ ಕನ್ನಡಕ್ಕಾಗಿ ಹೋರಾಟ ನಡೆಸಿದ್ದಾನೆ. ಮಾಡಬಾರದ ತಪ್ಪೇನೂ ಮಾಡಿಲ್ಲ, ಕೂಡಲೇ ಜೈಲಿನಿಂದ ಬಿಡುಗಡೆ ಮಾಡುವಂತೆ ನಾನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರ ಮನೆ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಗೌರಮ್ಮ ವಿಡಿಯೋದಲ್ಲಿ ಎಚ್ಚರಿಕೆ ನೀಡಿದ್ದಾರೆ.







