Hunsur | ಚಿನ್ನದ ಅಂಗಡಿ ದರೋಡೆ ಪ್ರಕರಣ; ಬಿಹಾರ ಮೂಲದ ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ | PC : gemini AI
ಮೈಸೂರು : ಹುಣಸೂರಿನಲ್ಲಿ ನಡೆದ ಚಿನ್ನದ ಅಂಗಡಿ ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ಇಬ್ಬರನ್ನು ಬಂಧಿಸಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಬಂಧಿತರನ್ನು ರಿಷಿಕೇಶ್ ಅಲಿಯಾಸ್ ಚೋಟಾ ಸಿಂಗ್ ಮತ್ತು ಪಂಕಜ್ ಕುಮಾರ್ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ 10 ಕ್ಕೂ ಹೆಚ್ಚು ಆರೋಪಿಗಳಿದ್ದು, ಅವರ ಪತ್ತೆಗೆ ಕಾರ್ಯಾಚರಣೆ ನಡೆದಿದೆ. ಪ್ರಕರಣದ ತನಿಖೆ ಆರಂಭಿಸಿದಾಗ ಐವರು ದರೋಡೆ ನಡೆಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅವರೆಲ್ಲರೂ ಮೊಬೈಲ್ ಬಳಸದೇ ಇದ್ದ ಕಾರಣ ಆರೋಪಿಗಳನ್ನು ಹುಡುಕುವುದು ಕ್ಲಿಷ್ಟಕರವಾಗಿತ್ತು ಎಂದು ಎಸ್ಪಿ ತಿಳಿಸಿದರು.
ಸಿಸಿಟಿವಿ ದೃಶ್ಯಗಳಲ್ಲಿ ಮೂವರ ಮುಖ ಕಾಣಿಸುತ್ತಿತ್ತು. ಅವರ ಮುಖಚಹರೆ ಹಾಗೂ ನಮ್ಮಲ್ಲಿರುವ ತಂತ್ರಜ್ಞಾನ ಬಳಸಿದಾಗ ಬಿಹಾರ ರಾಜ್ಯದವರೆಂದು ತಿಳಿಯಿತು. ಅಲ್ಲಿನ ಪೊಲೀಸರನ್ನು ಸಂಪರ್ಕಿಸಿದಾಗ, ಆರೋಪಿಗಳ ಗುರುತು ಪತ್ತೆ ಹಚ್ಚಿದರು. ಎಎಸ್ಪಿ ಎಲ್.ನಾಗೇಶ್ ನೇತೃತ್ವದಲ್ಲಿ ಐದು ತಂಡಗಳನ್ನು ರಚಿಸಿ ವಿವಿಧ ಜಿಲ್ಲೆಗಳಿಗೆ ಕಳಿಸಿಕೊಡಲಾಯಿತು ಎಂದು ತಿಳಿಸಿದರು.
ಪತ್ತೆಯಾಗಿರುವ ಪಂಕಜ್ 27 ಪ್ರಕರಣ ಹಾಗೂ ರಿಷಿಕೇಶ್ ಅಲಿಯಾಸ್ ಚೋಟು 4 ಕೊಲೆ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಹುಣಸೂರು ದರೋಡೆ ಪ್ರಕರಣಕ್ಕೆ ಪಂಕಜ್ ಯುವಕರನ್ನು ಒಟ್ಟುಗೂಡಿಸಿದ್ದನು. ಹುಣಸೂರು ಮಾತ್ರವಲ್ಲದೆ ಬೇರೆಡೆಗಳ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಗಳ ದರೋಡೆ ಪ್ರಕರಣದಲ್ಲೂ ಇವರು ಭಾಗಿಗಳಾಗಿದ್ದಾರೆ. ಇತರೆ ಪ್ರಕರಣಗಳಲ್ಲಿ ಜೈಲು ಸೇರಿರುವಾಗ ಅಲ್ಲಿ ಸ್ನೇಹಿತರಾಗಿ ಬಳಿಕ ಗುಂಪಾಗಿ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದರು ಎಂಬ ಮಾಹಿತಿ ಇದ್ದು, ಪ್ರಕರಣದಲ್ಲಿ ವಿವಿಧ ರಾಜ್ಯಗಳ ಆರೋಪಿಗಳಿರುವ ಸಾಧ್ಯತೆಯಿದೆ. ಆದರೆ, ಸ್ಥಳೀಯರು ಯಾರೂ ಭಾಗಿಯಾಗಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದರು.
ಬಿಹಾರ ರಾಜ್ಯಕ್ಕೆ ತೆರಳಿದ್ದ ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್, ಡಿ.ಎಂ.ಪುನೀತ್, ಪಿಎಸ್ಐ ಅಜಯ್ ಕುಮಾರ್ ನೇತೃತ್ವದ ತಂಡವು ಬಿಹಾರ ಪೊಲೀಸರ ನೆರವಿನೊಂದಿಗೆ ದರ್ಬಾಂಗ್ ಜಿಲ್ಲೆಯಲ್ಲಿ ಕೃತ್ಯದಲ್ಲಿ ಭಾಗಿಯಾಗಿದ್ದ ದೆಹಲಿ ಮೂಲದ ರಿಷಿಕೇಶ್ ಕುಮಾರ್ ಸಿಂಗ್ ಮತ್ತು ಕೃತ್ಯಕ್ಕೆ ಯೋಜನೆ ರೂಪಿಸಿದ್ದ ಬಾಗಲ್ ಪುರ ಜಿಲ್ಲೆಯ ಪಂಕಜ್ ನನ್ನು ಬಂಧಿಸಲಾಗಿದೆ ಎಂದು ಹೇಳಿದರು.
ನಕಲಿ ದಾಖಲೆ ಬಳಸಿ ಕೃತ್ಯ :
ಇದು ವೃತ್ತಿಪರ ದರೋಡೆಕೋರರು ನಡೆಸಿದ ಕೃತ್ಯ. ಕರ್ನಾಟಕದಲ್ಲಿ ಮೊದಲ ಬಾರಿ ದರೋಡೆ ನಡೆಸಿದ್ದಾಗಿ ಮಾಹಿತಿ ಲಭ್ಯವಾಗಿದೆ. ಇದಕ್ಕಾಗಿ ಕೊಡಗು, ಹಾಸನ, ಮೈಸೂರು ಭಾಗಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಹುಣಸೂರಿನ ಬೈಪಾಸ್ ರಸ್ತೆಯಲ್ಲಿರುವ ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಚಿನ್ನಾಭರಣ ಮಳಿಗೆ ಗುರುತು ಮಾಡಿಕೊಂಡಿದ್ದಾರೆ. ಕೃತ್ಯಕ್ಕೂ ಮೊದಲು ಹುಣಸೂರು, ಪಿರಿಯಾಪಟ್ಟಣದ ಲಾಡ್ಜ್ ಗಳಲ್ಲಿ ವಾಸ್ತವ್ಯ ಮಾಡಿದ್ದು, ಅಲ್ಲಿ ನಕಲಿ ಆಧಾರ್ ಕಾರ್ಡ್ ಹಾಗೂ ಇನ್ಯಾರದ್ದೂ ಮೊಬೈಲ್ ಸಂಖ್ಯೆ ನಮೂದಿಸಿದ್ದಾರೆ. ಕೃತ್ಯ ನಡೆಸಿದ ಬಳಿಕ ಜೊತೆಗೆ ತೆರಳದೆ, ವಿವಿಧ ಕಡೆಗೆ ತೆರಳಿದ್ದಾರೆ ಎಂದು ಹೇಳಿದರು.
ಐವತ್ತು ಪೊಲೀಸರಿಂದ ಹುಡುಕಾಟ:
ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಮಳಿಗೆಯ ಸಿಬ್ಬಂದಿಗಳನ್ನು ಬೆದರಿಸಿ 10 ಕೋಟಿ ರೂ. ಮೌಲ್ಯದ 8.34 ಕೆಜಿ ಚಿನ್ನಾಭರಣ ದೋಚಿರುವ ಆರೋಪಿಗಳನ್ನು ಪತ್ತೆಹಚ್ಚಲು 50 ಪೊಲೀಸರು ಎರಡು ವಾರಗಳಿಂದ ಸತತವಾಗಿ ಹುಡುಕಾಟ ನಡೆಸಿದ್ದರು. ಆರೋಪಿಗಳಿಂದ ಒಟ್ಟು 12.5 ಗ್ರಾಂ ಚಿನ್ನಾಭರಣ ಹಾಗೂ 92 ಸಾವಿರ ರೂ. ನಗದು, ಸ್ಕೈ ಗೋಲ್ಡ್ ಚಿಹ್ನೆ ಇರುವ ಒಂದು ಬಾಕ್ಸ್, ರಾಯಲ್ ಎನ್ ಫೀಲ್ಡ್ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದರು.







