‘ಸತ್ಯದ ಪರ ನಿಲ್ಲುವ ಇಮಾಮ್ ಹುಸೇನ್ ಅವರ ಆದರ್ಶ ಮೈಗೂಡಿಸಿಕೊಳ್ಳಿ’ : 34ನೇ ವರ್ಷದ ‘ಹುಸೇನ್ ಡೇ’ ಕಾರ್ಯಕ್ರಮದಲ್ಲಿ ಧರ್ಮಗುರುಗಳು, ಚಿಂತಕರ ಕರೆ

ಬೆಂಗಳೂರು : ಪ್ರತಿಕೂಲ ಪರಿಸ್ಥಿತಿಯಲ್ಲಿ ಕೂಡ ಸತ್ಯದ ಪರ ನಿಲ್ಲುವಂತೆ ಜನರನ್ನು ಪ್ರೇರೇಪಿಸುವ ಹಝರತ್ ಇಮಾಮ್ ಹುಸೇನ್ ಅವರ ಆದರ್ಶ ತತ್ವಗಳನ್ನು ಭಾರತೀಯರು ಮೈಗೂಡಿಸಿಕೊಳ್ಳಬೇಕು ಎಂದು ವಿವಿಧ ಧರ್ಮಗಳ ಗುರುಗಳು, ಚಿಂತಕರು, ರಾಜಕೀಯ ಮುಖಂಡರು ಒಕ್ಕೂರಲಿನಿಂದ ಕರೆ ನೀಡಿದ್ದಾರೆ.
ರವಿವಾರ ನಗರದ ರಿಚ್ಮಂಡ್ ಟೌನ್‍ನಲ್ಲಿರುವ ಶಿಯಾ ಆರಾಮಗಾಹ್ ಮೈದಾನದಲ್ಲಿ ಆಯೋಜಿಸಿದ್ದ ‘ಜಾಗತಿಕ ಶಾಂತಿಗಾಗಿ ಜಾತ್ಯತೀತತೆ’ ಘೋಷವಾಕ್ಯದಡಿ 34ನೆ ವರ್ಷದ ‘ಹುಸೇನ್ ಡೇ’ ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಗುರುಗಳು, ಚಿಂತಕರು, ಕಲಾವಿದರು, ರಾಜಕೀಯ ಮುಖಂಡರು ಪಾಲ್ಗೊಂಡು, ಇಮಾಮ್ ಹುಸೇನ್(ಅ) ಅವರ ಹೋರಾಟ, ಸಾಮಾಜಿಕ ನ್ಯಾಯದ ತತ್ವಗಳ ಬಗ್ಗೆ ಪ್ರಸ್ತುತಪಡಿಸಿದರು.
1400 ವರ್ಷಗಳ ಹಿಂದೆ ಕರ್ಬಲಾ ಯುದ್ಧದಲ್ಲಿ ಇಮಾಮ್ ಹುಸೇನ್ ಅವರು ಇಡೀ ವಿಶ್ವಕ್ಕೆ ತ್ಯಾಗ, ಬಲಿದಾನ, ಸಾಮಾಜಿಕ ನ್ಯಾಯದ ಸಂದೇಶವನ್ನು ನೀಡುತ್ತಾ ಹುತಾತ್ಮರಾದರು. ಆದರೆ, ಅವರ ತ್ಯಾಗಗಳು ಧರ್ಮದ ಬಗೆಗಿನ ಅವರಲ್ಲಿದ್ದ ಬದ್ಧತೆಯನ್ನು ತೋರಿಸುತ್ತದೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ಕೂಡ ಸತ್ಯದ ಪರ ನಿಲ್ಲುವಂತೆ ಅವರು ಜನರನ್ನು ಪ್ರೇರೇಪಿಸಿದ ಪರಿ ಇಂದು ಭಾರತಕ್ಕೆ ಅಗತ್ಯವಾಗಿದೆ ಎಂದು ವೇದಿಕೆಯಲ್ಲಿ ಕರೆ ನೀಡಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ವಿದ್ವಾಂಸ ಪಂಡಿತ್ ವಿಜಯಕುಮಾರ್ ಶರ್ಮಾ, ಇತ್ತೀಚಿನ ದಿನಗಳಲ್ಲಿ ಇರಾನ್ ತನ್ನ ಶಕ್ತಿಯನ್ನು ಜಗತ್ತಿನ ಮುಂದೆ ಪ್ರದರ್ಶನ ಮಾಡಿದೆ. ಆದರೆ, ಒಂದು ಸಣ್ಣ ರಾಷ್ಟ್ರವು ಇಮಾಮ್ ಹುಸೇನ್ ಅವರ ತತ್ವಗಳನ್ನು ಪಾಲಿಸಿ ಬಲಾಢ್ಯ ಎಂದು ಕರೆಸಿಕೊಳ್ಳುವ ರಾಷ್ಟ್ರಗಳನ್ನೆ ನೆಲಕ್ಕೆ ಉರುಳಿಸಿವೆ. ಇದು ಸಾಮಾನ್ಯ ಬೆಳವಣಿಗೆಯಲ್ಲ, ಇಂತಹ ಶಕ್ತಿ, ಏಕತೆ ಇಮಾಮ್ ಹುಸೇನ್ ಅವರ ಕರ್ಬಲಾ ಯುದ್ಧದಿಂದ ಹಿಡಿದು ಇಲ್ಲಿಯವರೆಗೆ ಜೀವಂತವಾಗಿದೆ ಎನ್ನುವುದು ಗಮನಿಸಬೇಕು. ಹೀಗಾಗಿ, ಇಮಾಮ್ ಹುಸೇನ್ ಅವರ ತತ್ವಗಳು ನಮ್ಮ ದೇಶಕ್ಕೆ, ಯುವಪೀಳಿಗೆಗೆ ಆದರ್ಶವಾಗಬೇಕಾಗಿದೆ ಎಂದು ನುಡಿದರು.
ಇದಕ್ಕೂ ಮೊದಲ ಮಾತನಾಡಿದ ರಾಜ್ಯಸಭಾ ಕಾಂಗ್ರೆಸ್ ಸದಸ್ಯ ಪವನ್ ಖೇರಾ, ಎಲ್ಲರಲ್ಲಿಯೂ ಒಬ್ಬರು ಇಮಾಮ್ ಹುಸೇನ್ ಇದ್ದಾರೆ. ಸತ್ಯದ ಪರ ಹೋರಾಟ ನಡೆಸುವ, ಕೆಟ್ಟ ಶಕ್ತಿಗಳನ್ನು ಎದುರಿಸುವ ಗುಣ ಅವರಿಂದಲೇ ನಮಗೆ ಬಂದಿದೆ. ನಾವು ರಾಮ, ಬುದ್ಧ ಅವರಂತೆ ಇಮಾಮ್ ಹುಸೇನ್ ಅವರ ಬಗ್ಗೆಯೂ ಈ ಸಮಾಜಕ್ಕೆ ತಿಳಿದುಕೊಳ್ಳಬೇಕಾಗಿದೆ. ಕರ್ಬಲಾ ಯುದ್ಧದ ಇತಿಹಾಸ ತಿಳಿಯುತ್ತ ಹೋದರೆ ನಮ್ಮನ್ನು ನಾವು ಕಳೆದುಕೊಂಡು, ಇಮಾಮ್ ಹುಸೇನ್ ಅವರಂತೆ ಆಗುತ್ತೇವೆ. ಹಾಗಾಗಿ, ಮುಂದಿನ ಪೀಳಿಗೆಗೆ ಅವರ ಬಗ್ಗೆ ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ.‘ ಹುಸೇನ್ ಡೇ’ನಂತಹ ಕಾರ್ಯಕ್ರಮಗಳು ಹಲವು ಕಡೆ ನಡೆಯುವ ಅವಶ್ಯಕತೆ ಇದೆ ಎಂದರು.
ಗುರುಸಿಂಗ್ ಸಭಾದ ಮುಖ್ಯ ಗ್ರಂಥಿ ಜ್ಞಾನಿ ಬುಟಾ ಸಿಂಗ್ ಮಾತನಾಡಿ, ಸರ್ವ ಧರ್ಮೀಯರನ್ನು ಸಮಾನವಾಗಿ ಕಾಣುವ ಭಾರತೀಯ ಸಂಸ್ಕೃತಿ ಹಾಗೂ ಸಂಪ್ರದಾಯಕ್ಕೆ ಇಂದು ಜಗತ್ತೇ ತಲೆ ಬಾಗುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ರಾಜಕೀಯ ಲಾಭಕ್ಕಾಗಿ ಎರಡು ಪ್ರಮುಖ ಸಮುದಾಯಗಳ ನಡುವೆ ಜಗಳ ಹಚ್ಚಿ ದೇಶದ ಹೆಸರನ್ನೆ ಹಾಳು ಮಾಡಲಾಗುತ್ತಿದೆ. ಹಾಗಾಗಿ, ಸಮಾಜದ ಸ್ವಾಸ್ಥ ಕೆಡಿಸುವವರನ್ನು ನಿಯಂತ್ರಣಕ್ಕೆ ತರುವ ಕೆಲಸ ಆಗಬೇಕು.ಇದಕ್ಕಾಗಿ ನಾವು ಜಾತ್ಯತೀತ ತತ್ವಗಳಿಗೆ ಮತ್ತಷ್ಟು ಬಲ ನೀಡಬೇಕಾಗಿದೆ ಎಂದು ಹೇಳಿದರು.
ಸಂಸದ ಇಮ್ರಾನ್ ಮಸೂದ್ ಮಾತನಾಡಿ, ಇಮಾಮ್ ಹುಸೇನ್ ಅವರಂತೆ ಭಾರತೀಯ ಮುಸ್ಲಿಮರು ಜಾತ್ಯತೀತ ತತ್ವಗಳನ್ನು ಹೆಚ್ಚಾಗಿ ಅಳವಡಿಸಿಕೊಳ್ಳಬೇಕು. ಜತೆಗೆ, ಸಂವಿಧಾನ ಕಾಪಾಡುವಲ್ಲಿ ನಮ್ಮ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ಧರ್ಮದ ಹೆಸರಿನಲ್ಲಿ ನಮ್ಮನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಆದರೆ, ವಾಸ್ತವವಲ್ಲಿ ಅವರು ಮಂದಿರ, ಗುರುದ್ವಾರದಲ್ಲಿರುವ ಸಂಪತ್ತಿನ ಮೇಲೆ ನಿಗಾ ಇಟ್ಟಿದ್ದು, ಅದನ್ನು ಲೂಟಿ ಮಾಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ಕಾರ್ಯಕ್ರಮದ ಸಂಚಾಲಕ ಆಗಾ ಸುಲ್ತಾನ್ ಮಾತನಾಡಿ, ಇಡೀ ವಿಶ್ವದಲ್ಲಿ ಹಿಂಸೆ, ಕ್ರೌರ್ಯ ಹೆಚ್ಚುತ್ತಿದೆ. ನಮ್ಮ ದೇಶದಲ್ಲಿಯೂ ಧರ್ಮ, ಜಾತಿಯ ಹೆಸರಿನಲ್ಲಿ ಹಿಂಸೆ, ಅಸಹಿಷ್ಣುತೆ ಹೆಚ್ಚುತ್ತಿರುವುದು ನಾವು ನೋಡುತ್ತಿದ್ದೇವೆ. ಆದುದರಿಂದ, ಈ ವರ್ಷ ‘ಜಾಗತಿಕ ಶಾಂತಿಗಾಗಿ ಜಾತ್ಯತೀತತೆ’ ಎಂಬ ಘೋಷವಾಕ್ಯದಡಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಬಿಡಿಎ ಅಧ್ಯಕ್ಷ ಎನ್.ಎ.ಹಾರಿಸ್, ಸಂಗೀತ ಸಂಯೋಜಕ ಸಲೀಂ ಮರ್ಚೆಂಟ್, ಮಾಜಿ ಸಚಿವ ರೋಶನ್ ಬೇಗ್, ಸೇಂಟ್ ಜೋಸೆಫ್ ವಿವಿ ಕುಲಪತಿ ರೆ.ಫಾ.ವಿಕ್ಟರ್ ಲೋಬೊ, ಇಸ್ಲಾಮಿಕ್ ವಿದ್ವಾಂಸ ಡಾ.ಮುಹಮ್ಮದ್ ಸಮೀರ್ ಶಫಿ ಸಿದ್ದೀಖಿ, ಮೌಲಾನಾ ಸಯ್ಯದ್ ಖಮರ್ ಹಸ್ನೈನ್ ರಿಝ್ವಿ, ಭಕ್ತಿ ಭವನ ಸೆಮಿನರಿಯ ರೆಕ್ಟರ್ ಫಾ.ಆಡ್ರಿಯನ್ ಮಸ್ಕರೆನ್ಹಾಸ್ ಸೇರಿದಂತೆ ಪ್ರಮುಖರಿದ್ದರು.






