ನನಗೆ ಸಚಿವ ಸ್ಥಾನ ನೀಡುವುದು ನಿಶ್ಚಿತ : ಶಾಸಕ ಎಂ.ಕೃಷ್ಣಪ್ಪ ವಿಶ್ವಾಸ

ಬೆಂಗಳೂರು : ನನಗೆ ಸಂಪುಟದಲ್ಲಿ ಸ್ಥಾನ ನೀಡುವ ಸಂಬಂಧ ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ. ಈ ಬಾರೀ ನನಗೆ ಸಚಿವ ಸ್ಥಾನ ನೀಡುವುದು ನಿಶ್ಚಿತವಾಗಿದೆ ಎಂದು ಬೆಂಗಳೂರಿನ ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಕಾರಣಕ್ಕೂ ಪಕ್ಷ ಬದಲಾವಣೆ ಮಾಡುವುದಿಲ್ಲ. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಮುಖಂಡರಾದ ಸೋನಿಯಾ ಗಾಂಧಿ ಅವರು ನನಗೆ ಸಚಿವ ಸ್ಥಾನ ನೀಡುವ ಬಗ್ಗೆ ತೀರ್ಮಾನ ಮಾಡುತ್ತಾರೆ. ಆದರೆ, ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂದರು.
ಕಾಂಗ್ರೆಸ್ ಪಕ್ಷವು ನಮ್ಮನ್ನು ಕೈಬಿಡುವುದಿಲ್ಲ. ನಾನು ವೈಟಿಂಗ್ ಲಿಸ್ಟ್ ನಲ್ಲಿ ಇಲ್ಲ. ನಾನು ಕಾಂಗ್ರೆಸ್ ಪಕ್ಷದ ಕಟ್ಟಾಳು, ಪಕ್ಷ ಹೇಳಿದಂತೆ ಮಾಡಲಿದೆ. ನಾನು ಕಾಂಗ್ರೆಸ್ ಪಕ್ಷ ಹೇಳಿದಂತೆ ನಡೆದುಕೊಂಡು ಬಂದಿದ್ದೇನೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಪ್ರಿಯಾಕೃಷ್ಣ ಒಬ್ಬರೇ ಗೆದ್ದಿದ್ದು. ಯಡಿಯೂರಪ್ಪ ಅವಧಿಯಲ್ಲೂ ಎಲ್ಲರ ನಡುವೆ ಒಬ್ಬನೇ ಗೆದ್ದಿದ್ದು. ಪಕ್ಷ ಅವಕಾಶ ಕೊಟ್ಟಾಗ ಪ್ರಿಯಾಕೃಷ್ಣ ಗೆದ್ದಿದ್ದಾರೆ ಎಂದು ನುಡಿದರು.
ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ನಿಂದ ನಾನು, ಪ್ರಿಯಾಕೃಷ್ಣ ಹಾಗೂ ರಾಮಲಿಂಗಾರೆಡ್ಡಿ ಗೆದ್ದುಕೊಂಡು ಬಂದಿದ್ದೇವೆ. ಹಾಗಾಗಿ ನಾನು ಪಕ್ಷ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಮಂತ್ರಿ ಸ್ಥಾನ ಹಿಂದೆ ಸಿಕ್ಕಿದೆ, ಈಗ ಸಿಕ್ಕಿಲ್ಲ ಅನ್ನೋ ಅಸಮಾಧಾನ ಇಲ್ಲ. ನನ್ನ ಕೆಲಸ ಕಾರ್ಯಗಳು ಉತ್ತಮವಾಗಿವೆ ಎಂದು ಅವರು ಹೇಳಿದರು.






