ನಾನು ಯಾವಾಗ್ಲು ಸಿಎಂ ರೇಸ್ ನಲ್ಲಿ ಇರ್ತಿನಿ: ಡಾ.ಜಿ.ಪರಮೇಶ್ವರ್

ಜಿ.ಪರಮೇಶ್ವರ್
ಬೆಂಗಳೂರು: ''ನಾನು ಯಾವಾಗ್ಲು ರೇಸ್ ಅಲ್ಲಿ ಇರ್ತಿನಿ ಕಣ್ರಿ'' ಇದು ಗೃಹಸಚಿವ ಡಾ. ಜಿ.ಪರಮೇಶ್ವರ್ ಹೇಳಿಕೆ.
ಸದಾಶಿವನಗರದ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರು, ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಈ ರೀತಿ ಪ್ರತಿಕ್ರಿಯಿಸಿದರು.
ನೀವು ಸಿಎಂ ರೇಸ್ ನಲ್ಲಿ ಇದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ನಾನು ಯಾವಾಗ್ಲು ರೇಸ್ ಅಲ್ಲಿ ಇರ್ತಿನಿ ಕಣ್ರಿ. 2013ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿದ್ದೆ. ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೆವು. ನಾನೊಬ್ಬನೇ ಸರ್ಕಾರ ಅಧಿಕಾರಕ್ಕೆ ತಂದಿದ್ದು ಅಂತ ಇಲ್ಲಿಯವರೆಗೂ ನಾನು ಎಲ್ಲೂ ಹೇಳಿಲ್ಲ. ಎಲ್ಲರು ಸೇರಿ ಕೆಲಸ ಮಾಡಿದ್ವಿ. ಜನರು ಓಟ್ ಹಾಕಿ ಪಕ್ಷವನ್ನು ಗೆಲ್ಲಿಸಿದ್ದರು. ಆ ಸಂದರ್ಭದಲ್ಲಿ ನಾನು ಪರಾಭವಗೊಂಡೆ. ಒಂದು ವೇಳೆ ನಾನು ಗೆದ್ದಿದ್ದರೆ ಏನಾಗುತ್ತಿತ್ತು ಗೊತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರಿಗೆ ಒಂದು ಅವಕಾಶ ಕೊಡುತ್ತಾರೆ. ಅದು ಕೆಲವು ಸಂದರ್ಭದಲ್ಲಿ ಸಾಧ್ಯವಾಗುವುದಿಲ್ಲ ಎಂದರು.
ಆ ಕನಸು ಈಗ ಈಡೇರುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನಗೆ ಆ ಕನಸೇ ಬಿದ್ದಿಲ್ಲವಲ್ಲ ಎಂದು ಹೇಳಿದರು.
ದಲಿತ ನಾಯಕರು ಸಿಎಂ ಆಗಬೇಕು ಎಂದು ಬಹಳ ದಿನದಿಂದ ಕೇಳುತ್ತಿದ್ದಾರೆ. ನಾವು ಊಟಕ್ಕೆ ಸೇರಿದ ತಕ್ಷಣ ಆಗಿಬಿಡುತ್ತದೆಯೇ? ನಾವೆಲ್ಲ ಸಮಾನ ಮನಸ್ಕರಿದ್ದೇವೆ. ಒಳಮೀಸಲಾತಿ ಬಗ್ಗೆ ಹೋರಾಟ ಅಯ್ತು. ನಮ್ಮ ಸಮಸ್ಯೆಗಳ ಚರ್ಚೆ ಮಾಡಬಾರದೇ ಎಂದು ಅವರು ಮರುಪ್ರಶ್ನಿಸಿದರು.
ಸಿಎಂ ಬದಲಾವಣೆಯ ಕೂಗು ಬಂದರೆ ಪರಿಗಣಿಸುವಂತೆ ಹೇಳುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ.. ಆ ಸಂದರ್ಭ ಬರಲಿ. ಸಂದರ್ಭ ಇನ್ನು ಬಂದಿಲ್ಲ. ಎಐಸಿಸಿ ಅಧ್ಯಕ್ಷರನ್ನು ನಾನೇನು ಹೋಗಿ ಭೇಟಿ ಮಾಡುವುದಿಲ್ಲ. ಬೇಕಾದಾಗ ನಾನು ಹೋಗಿ ಅವರನ್ನು ಭೇಟಿ ಮಾಡುತ್ತೇನೆ ಎಂದರು.
ನಮ್ಮ ನಾಯಕರಾದ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಬಂದ ನಂತರ ಪಕ್ಷದಲ್ಲಿ ಅಂತ ಬೆಳವಣಿಗೆಗಳಿದ್ದರೆ ಚರ್ಚೆ ಮಾಡಿ ಎಐಸಿಸಿ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ಕರ್ನಾಟಕದವರೇ ಎಐಸಿಸಿ ಅಧ್ಯಕ್ಷರಿದ್ದಾರೆ. ರಾಜ್ಯ ರಾಜಕೀಯದ ಬಗ್ಗೆ ಅವರಿಗೆ ಗೊತ್ತಿರುವಷ್ಟು ಯಾರಿಗೂ ಗೊತ್ತಿಲ್ಲ. ಐವತ್ತು ವರ್ಷ ಸುದೀರ್ಘ ರಾಜಕಾರಣ ಮಾಡಿರುವವರು ಎಐಸಿಸಿ ಅಧ್ಯಕ್ಷರಿದ್ದಾರೆ. ತೀರ್ಮಾನಗಳನ್ನು ಮಾಡುತ್ತಾರೆ. ಪಕ್ಷದಲ್ಲಿ ಅಂತದ್ದೇನಾದರು ಗೊಂದಲಗಳಿದ್ದರೆ ರಾಹುಲ್ ಗಾಂಧಿ ಬಂದ ಬಳಿಕ ತೀರ್ಮಾನ ಮಾಡುತ್ತಾರೆ ಎಂದು ಹೆಳಿದರು.
ಬಿಜೆಪಿಗರು ಮೊದಲು ಅವರ ಮನೆಯ ಸಮಸ್ಯೆ ಸರಿಪಡಿಸಿಕೊಳ್ಳಲಿ
ರಾಜ್ಯಪಾಲರಿಗೆ ಬಿಜೆಪಿಯವರು ದೂರು ಕೊಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿಯವರನ್ನು ನಾವೇನು ಸರ್ಟಿಫಿಕೆಟ್ ಕೇಳುತ್ತಿಲ್ಲ. ಅವರ ಮನೆ ಹೇಗಿದೆ ಅಂತ ನೋಡಿಕೊಳ್ಳಲಿ. ಅಧ್ಯಕ್ಷನಾಗಿ ನಾನೇ ಮುಂದುವರಿಯುತ್ತೇನೆ ಎಂದು ವಿಜಯೇಂದ್ರ ಹೇಳಿಕೆ ಕೊಟ್ಟಿದ್ದಾರೆ. ಆ ಹೇಳಿಕೆಯ ಅಗತ್ಯ ಇದೆಯೇ? ಮೊದಲು ಅವರ ಮನೆಯ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಹೇಳಿ. ಆ ಮೇಲೆ ನಮ್ಮನ್ನು ಕೇಳಲಿ ಎಂದು ತಿರುಗೇಟು ನೀಡಿದರು.







