ನಾನು ಬಿಜೆಪಿಗೆ ಮರಳಬೇಕಿದ್ದರೆ ವಿಜಯೇಂದ್ರ ರಾಜೀನಾಮೆ ನೀಡಬೇಕು: ಬಸನಗೌಡ ಯತ್ನಾಳ್

ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ : ನಾನು ಬಿಜೆಪಿ ಪಕ್ಷಕ್ಕೆ ಮರಳಬೇಕಿದ್ದರೆ ‘ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಲ್ಲದೆ, ತಾನು ಮುಖ್ಯಮಂತ್ರಿ ಅಭ್ಯರ್ಥಿಯಲ್ಲ’ ಎಂದು ಸ್ಪಷ್ಟನೆ ನೀಡಸಬೇಕೆಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಷರತ್ತು ಹಾಕಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಹಲವು ಮಂದಿ ಪ್ರಾಮಾಣಿಕರಿದ್ದು, ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಬಿಂಬಿಸಬೇಕು. ಅದನ್ನು ಬಿಟ್ಟು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಸಿಎಂ ಅಭ್ಯರ್ಥಿ ಎಂದು ಹೇಳುವುದು ಸಲ್ಲ. ಕಳಂಕಿತರ ಕೈಯಲ್ಲಿ ಬಿಜೆಪಿ ಉಳಿಯಬಾರದು ಎಂದು ಹೇಳಿದರು.
ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದು, ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಉಳಿಸಲು ಭೇಟಿ ಮಾಡಿದ್ದಾರೆಯೇ ಹೊರತು ಬೇರೆ ಯಾವುದೇ ಕಾರಣವಿಲ್ಲ ಎಂದು ಯತ್ನಾಳ್ ತಿಳಿಸಿದರು.
ದೇವೇಗೌಡರ ಭೇಟಿಯ ಹಿಂದಿನ ಉದ್ದೇಶ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವುದಾಗಿದೆ. ದೇವೇಗೌಡ ಮತ್ತು ಮೋದಿ ಸಹಾಯದಿಂದ ವಿಜಯೇಂದ್ರರನ್ನು ಉಳಿಸಿಕೊಳ್ಳಲು ಬಿಎಸ್ವೈ ಪ್ರಯತ್ನಿಸುತ್ತಿದ್ದಾರೆ. ‘ಜೆಡಿಎಸ್-ಬಿಜೆಪಿ ಮೈತ್ರಿ ಇಲ್ಲ’ ಎಂದು ಈ ಹಿಂದೆ ಬಿ.ಎಸ್.ವೈ. ಹೇಳಿದ್ದರು. ಇದೀಗ ಮೈತ್ರಿ ಮಾತನಾಡುತ್ತಿದ್ದಾರೆ ಎಂದು ಯತ್ನಾಳ್ ಟೀಕಿಸಿದರು.






