ವ್ಯಾಪಾರ ನೀತಿಯಲ್ಲಿ ರಾಜಿ ಮಾಡಿಕೊಳ್ಳುವ ಮನಸ್ಥಿತಿಯಿಂದ ಬ್ಯಾರಿ ವ್ಯಾಪಾರಿಗಳು ಹೊರ ಬಂದರೆ ಜಾಗತಿಕ ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳಬಹುದು: ಉಮರ್ ಟೀಕೆ

ಬೆಂಗಳೂರು: ಬ್ಯಾರಿ ಸಮುದಾಯದ ವ್ಯಾಪಾರಿಗಳು ಸಣ್ಣ ಉದ್ಯಮ ಅಥವಾ ವ್ಯಾಪಾರ ವ್ಯವಸ್ಥಿತವಾಗಿ ನಡೆಸು ವುದು, ಲೆಕ್ಕಪತ್ರಗಳನ್ನು ಅಧಿಕೃತಗೊಳಿಸುವುದು ಇಂದಿನ ಅಗತ್ಯತೆ ಆಗಿದೆ. ತಕ್ಷಣದ ದೊಡ್ಡ ಲಾಭಗಳಿಗಾಗಿ ಉದ್ಯಮ ನೀತಿಯಲ್ಲಿ ರಾಜಿ ಮಾಡಿಕೊಳ್ಳುವ ಮನಸ್ಥಿತಿಯಿಂದ ನಾವು ಹೊರ ಬರುವುದು ಕೂಡ ಅಗತ್ಯವಾಗಿದೆ ಎಂದು ಉದ್ಯಮಿ ಉಮರ್ ಟೀಕೆ ಅಭಿಪ್ರಾಯ ವ್ಯಕ್ತಪಡಿಸಿದರು.
ಬ್ಯಾರೀಸ್ ಬಿಸಿನೆಸ್ ಫೋರಮ್ ನ ಮಾರ್ಗದರ್ಶಕರಾದ ಅವರು, ಶುಕ್ರವಾರ ಬೆಂಗಳೂರಿನ ಬ್ಯಾರಿ ಭವನದಲ್ಲಿ ಬ್ಯಾರೀಸ್ ಬಿಸಿನೆಸ್ ಫೋರಮ್ ಆಯೋಜಿಸಿದ ಪಸ್ಟ್ ಸ್ಟೆಪ್ ಎಂಬ ಸಮಾಲೋಚನಾ ಸಭೆಯಲ್ಲಿ ಮಾತನಾಡುತ್ತಾ, ವ್ಯವಹಾರವು ಶಿಸ್ತು ಮತ್ತು ಸಿಸ್ಟಂ ನಲ್ಲಿ ಇಲ್ಲದೇ ಇದ್ದರೆ ಯಶಸ್ಸು ಸಾಧ್ಯವಿಲ್ಲ. ನಾವು ವ್ಯಾಪಾರಿಗಳ ಜನಾಂಗ ಹೌದು, ಆದರೆ ಜಾಗತಿಕ ವ್ಯಾಪಾರದಲ್ಲಿ ಸ್ಪರ್ಧಿಸುವ ಪದ್ಧತಿಗಳನ್ನು ನಾವು ಅನ್ವಯಿಸಿಲ್ಲ, ಹಾಗಾಗಿ ನಾವು ದೊಡ್ಡ ಉದ್ಯಮ ಕ್ಷೇತ್ರದಲ್ಲಿ ಗುರುತಿಸಲು ಸಾಧ್ಯವಾಗಿಲ್ಲ ಎಂದರು.
ಬ್ಯಾರೀಸ್ ಬಿಸಿನೆಸ್ ಫೋರಮ್ ಅನ್ನು ವಿವಿಧ ಕ್ಷೇತ್ರಗಳ ಬ್ಯಾರಿ ಉದ್ಯಮಿಗಳು ಮತ್ತು ವ್ಯಾಪಾರಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಲು ಸ್ಥಾಪಿಸಲಾಗಿದೆ. ಸಹಕಾರವನ್ನು ಬೆಳೆಸುವುದು, ವ್ಯಾಪಾರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವುದು ಮತ್ತು ಸ್ಪಷ್ಟ ಫಲಿತಾಂಶಗಳನ್ನು ಸಾಧಿಸುವುದು ಈ ವೇದಿಕೆಯ ಮುಖ್ಯ ಉದ್ದೇಶವಾಗಿದೆ. ಬ್ಯಾರಿ ಉದ್ಯಮ ಮತ್ತು ವ್ಯವಹಾರ ಪರಿಸ್ಥಿತಿಗಳ ಕುರಿತು ಎರಡು ವರ್ಷಗಳ ಅಧ್ಯಯನವನ್ನು ನಡೆಸಿದ ನಂತರ ವೇದಿಕೆಯು ತನ್ನ ಗುರಿಗಳನ್ನು ಸಾಧಿಸುವತ್ತ ತನ್ನ ಮೊದಲ ಹೆಜ್ಜೆಯನ್ನು ಇಟ್ಟಿದೆ ಎಂದು ಬ್ಯಾರೀಸ್ ಬಿಸಿನೆಸ್ ಫೋರಮ್‌ನ ಸಲಹೆಗಾರ ಮತ್ತು ಪುತ್ತೂರು ಕಮ್ಯೂನಿಟಿ ಸೆಂಟರ್ ನ ಸಂಸ್ಥಾಪಕ ಹನೀಫ್ ಪುತ್ತೂರು ಅವರು ಹೇಳಿದರು.
ವೇದಿಕೆಯನ್ನು ಪರಿಣಾಮಕಾರಿ ಮತ್ತು ಫಲಿತಾಂಶ-ಆಧಾರಿತವಾಗಿ ವಿನ್ಯಾಸಗೊಳಿಸಲಾಗಿದೆ. ವೇದಿಕೆಯ ಪ್ರಯತ್ನಗಳು ಬ್ಯಾರಿ ವ್ಯಾಪಾರ ಸಮುದಾಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ನಿರೀಕ್ಷೆಯಿದೆ, ನಾವು ಈಗ ನೂರು ಉದ್ಯಮಿಗಳನ್ನು ಸಂಘಟಿಸಿದ್ದೇವೆ, ಮುಂದಿನ ಆರು ತಿಂಗಳಲ್ಲಿ ಐನೂರರಷ್ಟು ಉದ್ಯಮಿಗಳನ್ನು ಈ ವೇದಿಕೆಯಲ್ಲಿ ಸೇರಿಸುವ ಗುರಿ ಹೊಂದಿದ್ದೇವೆ ಎಂದರು.
ಸಮಾಲೋಚನಾ ಸಭೆಯಲ್ಲಿ ಬ್ಯಾರಿ ಸಮುದಾಯದ ಬೆಳವಣಿಗೆಯ ಬಗ್ಗೆ ಹಾಗೂ ಬೇರೆ ಬೇರೆ ಕ್ಷೇತ್ರದ ಸಾಧನೆಗಳ ಬಗ್ಗೆ ಬೆಳಕು ಚೆಲ್ಲುವ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.
ಭಾರತದ ಮೊದಲ ದತ್ತಾಂಶ ಆಧಾರಿತ ಮಾರಾಟ ನಿರ್ವಹಣಾ ಸಂಸ್ಥೆಯಾದ ಕನ್ಸಲ್ಟಿಕೊ ದ ಟ್ರೈನರ್ ಗಳು ವ್ಯಾಪಾರ ನಿರ್ವಹಣೆ ಮತ್ತು ಅಭಿವೃದ್ಧಿ ಹೇಗೆ ಎನ್ನುವ ಕುರಿತ ತರಬೇತಿಯನ್ನು ನೀಡಿದರು.
ಕಾರ್ಯಕ್ರಮದ ಪ್ರಮುಖ ಭಾಗವಾಗಿ ಬ್ಯಾರಿ ಉದ್ಯಮಿಗಳ ಬೇಡಿಕೆ ಮತ್ತು ಸವಾಲುಗಳ ಕುರಿತ ಅಭಿಪ್ರಾಯ ಸಂಗ್ರಹಿಸುವ ಸಂವಾದ ನಡೆಯಿತು.
ಬ್ಯಾರಿ ಉದ್ಯಮಿಗಳ ವೇದಿಕೆಯ ಅಗತ್ಯತೆ, ಅದರ ಕಾರ್ಯವ್ಯಾಪ್ತಿ, ನಿರ್ವಹಣೆ ಮತ್ತು ಯೋಜನೆಗಳು ಹೇಗೆ ಇರಬೇಕು ಎನ್ನುವ ಕುರಿತಂತೆ ಆಗಮಿಸಿದ ವ್ಯಾಪಾರಿಗಳ ಅಭಿಪ್ರಾಯ ಸಂಗ್ರಹಿಸಲಾಯಿತು. ಹಲವಾರು ರಚನಾತ್ಮಕ ಆಲೋಚನೆಗಳು ಮತ್ತು ಪ್ರಾಯೋಗಿಕ ಅನಿಸಿಕೆಗಳನ್ನು ಸಂಗ್ರಹಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಲವು ವ್ಯಾಪಾರಿಗಳು, ಉದ್ಯಮಿಗಳು ತಾವು ಸಾಗಿ ಬಂದ ಸ್ಪೂರ್ತಿದಾಯಕ ಕಥೆಗಳನ್ನು ಹೇಳಿದರು. ಎಲ್ಲರೂ ಇದರಿಂದ ಪ್ರೇರಣೆ ಪಡೆದರು ಮತ್ತು ಪರಸ್ಪರ ತಾವು ಪರಿಚಯವಾಗಲು ಅನುಕೂಲ ಮಾಡಿದ Berays Business Forum ನ ಪ್ರಯತ್ನವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬೆಂಗಳೂರು ಪ್ರೆಸಿಡೆನ್ಸಿ ಕಾಲೇಜಿನ ಉಪಾಧ್ಯಕ್ಷರಾದ ಸುಹೈಲ್ ಅಹ್ಮದ್ ಅವರು "ನನಗೆ ಆಶ್ಚರ್ಯ ಆಯಿತು. ನಮ್ಮ ಯುವ ಬ್ಯಾರಿಗಳು ಬೆಂಗಳೂರಿನಲ್ಲಿ ಇಷ್ಟೊಂದು ದೊಡ್ಡ ದೊಡ್ಡ ಉದ್ಯಮ ಮತ್ತು ವ್ಯಾಪಾರ ನಡೆಸುತ್ತಾ ಇರುವುದು ನಾನಂತೂ ಊಹಿಸಿ ಇರಲಿಲ್ಲ. ಬೆಂಗಳೂರಿನಲ್ಲಿ ಪ್ರಸಿದ್ಧಿ ಪಡೆದ ಹಲವು ಸಂಸ್ಥೆಗಳು, ವ್ಯಾಪಾರ ಮಳಿಗೆಗಳು, ಹೋಟೆಲ್ ಗಳು, ಕಂಪೆನಿಗಳು ನಮ್ಮ ಬ್ಯಾರಿಗಳ ಹೆಸರಿನಲ್ಲಿವೆ. ಇವರೆಲ್ಲರ ಪರಿಚಯ ಆಗಿರುವುದು ನನಗೆ ಅಭಿಮಾನ ಆಯಿತು, ನಾವು ಜೊತೆಯಾಗಿ ದುಡಿಯುವ ನಮಗೆ ಖಂಡಿತಾ ಇದೊಂದು ಉತ್ತಮ ವೇದಿಕೆ" ಎಂದರು.
ಉದ್ಯಮಿ ತಸ್ಲೀಲ್ ಮಾತನಾಡಿ ಬಹಳ ಶಿಸ್ತುಬದ್ಧ ಮತ್ತು ರಚನಾತ್ಮಕ ಕಾರ್ಯಕ್ರಮ ಇದಾಗಿದೆ. ಯಾವುದೇ ಸಣ್ಣ ವ್ಯಾಪಾರಿಗಳಿಗೆ ಹತ್ತು ಲಕ್ಷದ ವರೆಗೆ ಹೂಡಿಕೆ ಮಾಡಲು ಬೇಕಿದ್ದರೆ ನಾನು ಪ್ರೋತ್ಸಾಹ ನೀಡಲು ಸಿದ್ಧನಿದ್ದೇನೆ ಎಂದರು.
ವಕೀಲರಾದ ನೂರುದ್ದೀನ್ ಸಾಲ್ಮರ ಮಾತನಾಡಿ, ಕರಾವಳಿಯಲ್ಲಿ ಆಕ್ರಂದನ ಸಾಕ್ಷ್ಯಚಿತ್ರ ಸಾಮಾಜಿಕ ಪರಿವರ್ತನೆ ತಂದಿತ್ತು, ಅನಂತರ ಆರ್ಥಿಕ ಪರಿವರ್ತನೆ ಈ ಸಂಸ್ಥೆ ಮಾಡಲಿ ಎಂದು ಹಾರೈಸಿದರು.
ಹಲವು ಉದ್ಯಮಿಗಳು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ನ ಆಸಿಫ್ ಮಸೂದ್, ಚಾಯಬ್ಬ, ನೂರರಷ್ಟು ಉದ್ಯಮಿಗಳು ಭಾಗವಹಿಸಿದ್ದರು.







