ಬಿಜೆಪಿ ಕತ್ತರಿಯಾದರೆ, ಕಾಂಗ್ರೆಸ್ ಸೂಜಿ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಡಿ.ಕೆ.ಶಿವಕುಮಾರ್ ತಿರುಗೇಟು

ಡಿ.ಕೆ.ಶಿವಕುಮಾರ್
ಬೆಂಗಳೂರು : ನಟ ಕಮಲ್ ಹಾಸನ್ ಕನ್ನಡ ವಿವಾದ ಕುರಿತು ಮೃದುಧೋರಣೆ ತಾಳಿದ್ದಾರೆಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ತಿರುಗೇಟು ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿ ಕತ್ತರಿಯಾದರೆ, ಕಾಂಗ್ರೆಸ್ ಸೂಜಿಯಾಗಿದೆ ಎಂದಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ, ಭಾಷೆ, ರಾಜ್ಯಗಳಿಗೆ ಜಗಳ ಮಾಡಿಸಲು ಆಗುತ್ತದೆಯೇ? ಬಿಜೆಪಿಯವರು ಸಮಾಜವನ್ನು ಒಡೆದು ಆಳುವವರು. ನಾವು ಸಮಾಜವನ್ನು ಒಂದುಗೂಡಿಸಿ ಆಡಳಿತ ಮಾಡುವವರು ಎಂದು ಹೇಳಿದರು.
ಕಬ್ಬಿಣದಿಂದ ಕತ್ತರಿ ಹಾಗೂ ಸೂಜಿ ಎರಡೂ ತಯಾರಾಗುತ್ತದೆ. ಬಿಜೆಪಿ ಕತ್ತರಿಯಾದರೆ, ಕಾಂಗ್ರೆಸ್ ಸೂಜಿಯಾಗಿದೆ. ನಿತ್ಯ ಸುಮಾರು 50 ಸಾವಿರ ನಮ್ಮ ಜನ ಹೊಸ ಊರಿಗೆ ಹೋಗುತ್ತಾರೆ. ಅಲ್ಲಿರುವವರು ಇಲ್ಲಿ ವಾಸ ಮಾಡುತ್ತಿದ್ದಾರೆ. ಏನಾದರೂ ಹೆಚ್ಚು ಕಮ್ಮಿಯಾದರೆ ಇವರ ಜವಾಬ್ದಾರಿ ಹೊರುವವರು ಯಾರು? ಕಮಲ್ ಅವರು ತಪ್ಪು ಮಾಡಿದ್ದರೆ ಕ್ಷಮೆ ಕೇಳುತ್ತಾರೆ. ಆದರೆ ಅದನ್ನು ಇಟ್ಟುಕೊಂಡು ಎಲ್ಲೆಲ್ಲಿಗೋ ವಿಚಾರಗಳನ್ನು ತೆಗೆದುಕೊಂಡು ಹೋಗಬಾರದು ಎಂದು ಅವರು ಹೇಳಿದರು.
ನ್ಯಾಯಾಲಯದಲ್ಲಿ ಈ ವಿವಾದಕ್ಕೆ ಒಂದು ಪರಿಹಾರ ಸಿಕ್ಕಿದೆ. ನ್ಯಾಯಾಲಯಕ್ಕೆ ಗೌರವಿಸಿ ಕ್ಷಮೆ ಕೇಳುತ್ತಾರೆ ಎಂದು ನಾನು ಭಾವಿಸಿದ್ದೇನೆ. ಈ ವಿಚಾರವನ್ನು ಬೇರೆ ಹಂತಕ್ಕೆ ತೆಗೆದುಕೊಂಡು ಹೋಗುವುದು ಬೇಡ. ಕಾನೂನು ಕೈಗೆ ತೆಗೆದುಕೊಳ್ಳುವುದು, ಚಿತ್ರ ಮಂದಿರಗಳ ಮುಂದೆ ಗಲಾಟೆ ಮಾಡುವುದು ಬೇಡ ಎಂದು ಕನ್ನಡ ಸಂಘಟನೆಗಳಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಅದು ಅಲ್ಲದೆ, ಈ ವಿವಾದದ ಬಗ್ಗೆ ಸಾಹಿತಿಗಳು ಹಾಗೂ ತಜ್ಞರ ಜತೆ ಚರ್ಚೆ ಮಾಡಿದೆ. ಆಗ ನನಗೆ ತಿಳಿದಿದ್ದು, ನಾವು ದ್ರಾವಿಡ ಭಾಗಕ್ಕೆ ಸೇರಿದವರು. ಇಲ್ಲಿ ಮೇಲು ಕೀಳು ಎಂಬ ಬೇಧವಿಲ್ಲ. ನಮ್ಮ ಭಾಷೆಗಳು ಒಂದರ ಜೊತೆ ಮತ್ತೊಂದು ತನ್ನದೇ ಆದ ರೀತಿಯಲ್ಲಿ ಬೆಸೆದುಕೊಂಡಿವೆ. ಕಮಲ್ ಹಾಸನ್ ಅವರ ಹೇಳಿಕೆ ವಿಚಾರ ನ್ಯಾಯಾಲಯ ಮೆಟ್ಟಿಲೇರಿದ್ದು, ಅದರ ಆದೇಶವನ್ನು ನಾವೆಲ್ಲರೂ ಪಾಲನೆ ಮಾಡಬೇಕು. ಇದಕ್ಕೆ ನನ್ನ ಸಹಮತವಿದೆ ಎಂದು ಹೇಳಿದರು.
“ಸಂಪುಟ ವಿಸ್ತರಣೆ ಸಿಎಂ ಅವರನ್ನೇ ಕೇಳಿ’ :
ಸರಕಾರಕ್ಕೆ 2 ವರ್ಷ ಪೂರೈಸಿದ ನಂತರ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂಬ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಈ ವಿಚಾರ ಏನಿದ್ದರೂ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳನ್ನೇ ಕೇಳಬೇಕು ಎಂದರು.
ನಿಗಮ ಮಂಡಳಿ ನೇಮಕ ಮಾತ್ರ ಶೀಘ್ರದಲ್ಲೇ ಮಾಡುತ್ತೇವೆ. ಈಗಾಗಲೇ ಗ್ಯಾರಂಟಿ ಸಮಿತಿಯಲ್ಲಿ 4 ಸಾವಿರ ಕಾರ್ಯಕರ್ತರಿಗೆ ಅಧಿಕಾರ ನೀಡಿದ್ದೇವೆ. 8 ಸಾವಿರ ಜನ ಕಾರ್ಯಕರ್ತರನ್ನು ಬೇರೆ ಬೇರೆ ಸಮಿತಿ ಸದಸ್ಯರನ್ನಾಗಿ ಮಾಡಿದ್ದೇವೆ. ರಾಜ್ಯ ಮಟ್ಟದಲ್ಲಿ 500-600 ಜನಕ್ಕೆ ಮಾಡಬೇಕಿದೆ. ಈ ಪಟ್ಟಿ ಸಿದ್ಧವಾಗಿದ್ದು, ಸ್ಥಳೀಯ ನಾಯಕರ ಜತೆ ಚರ್ಚಿಸಿ ಪ್ರಕಟಿಸುತ್ತೇವೆ ಎಂದು ತಿಳಿಸಿದರು







