ಅಕ್ರಮ ಚಿನ್ನ ಸಾಗಾಟ ಪ್ರಕರಣ: ನಟಿ ರನ್ಯಾ ರಾವ್ ಗೆ 89 ಕೋಟಿ ರೂ. ದಂಡ

ರನ್ಯಾ ರಾವ್
ಬೆಂಗಳೂರು: ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಡಿಆರ್ ಐ ನಿಂದ ಬಂಧಿತಳಾಗಿ ಈಗ ಜಾಮೀನು ಪಡೆದಿರುವ ನಟಿ ರನ್ಯಾ ರಾವ್ ಗೆ 89 ಕೋಟಿ ರೂ. ದಂಡ ವಿಧಿಸಿ ಕಸ್ಟಮ್ಸ್ ಇಲಾಖೆ ಅದೇಶ ಮಾಡಿದೆ.
ವಿದೇಶದಿಂದ ಅಕ್ರಮವಾಗಿ ನೂರಾರು ಕೋಟಿ ಮೌಲ್ಯದ ಚಿನ್ನ ಸಾಗಣೆ ಮಾಡಿರುವುದರಿಂದ ರನ್ಯಾ ರಾವ್ ಗೆ 89 ಕೋಟಿ ರೂ. ದಂಡ ಪಾವತಿಸುವಂತೆ ಕಸ್ಟಮ್ಸ್ ವಿಭಾಗದ ಜಂಟಿ ನಿರ್ದೇಶಕ ಸಂದೀಪ್ ನೋಟಿಸ್ ಜಾರಿ ಮಾಡಿದ್ದಾರೆ. ಈ ಅದೇಶದ ಜೊತೆಗೆ 399 ಪುಟಗಳ ವಿಸ್ತೃತ ತನಿಖಾ ವರದಿಯನ್ನೂ ಲಗತ್ತಿಸಲಾಗಿದೆ.
ಆರೋಪಿಗಳಾದ ನಟಿ ರನ್ಯಾ ರಾವ್, ಆಕೆಯ ಗೆಳೆಯ ತರುಣ್ ಹಾಗೂ ಇನ್ನೂ ಮೂವರು ಸೇರಿ ಮಾರ್ಚ್ 7, 2024ರಿಂದ ಫೆಬ್ರವರಿ 18, 2025ರ ಒಂದು ವರ್ಷದ ಅವಧಿಯಲ್ಲಿ ಒಟ್ಟು 113 ಕೆಜಿ ಚಿನ್ನವನ್ನು ವಿದೇಶಗಳಿಂದ ಅಕ್ರಮವಾಗಿ ಸಾಗಾಟ ಮಾಡಿರುವುದು ಕಸ್ಟಮ್ಸ್ ತನಿಖೆಯಲ್ಲಿ ರುಜುವಾಗಿರುವ ಹಿನ್ನಲೆ ಇಷ್ಟೊಂದು ದೊಡ್ಡ ಪ್ರಮಾಣದ ದಂಡ ವಿಧಿಸಲಾಗಿದೆ.
2025ರ ಮಾರ್ಚ್ ಮೂರರಂದು ಡಿಆರ್ ಐ ಅಧಿಕಾರಿಗಳು ರನ್ಯಾ ರಾವ್ ಳನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14 ಕೆಜಿ ಚಿನ್ನದ ಸಮೇತ ಬಂಧಿಸಿದ್ದರು. ಆಕೆಯ ಮೇಲೆ COFEPOSA ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆಗೆ ಒಳಪಡಿಸಿದಾಗ ಭಾರೀ ಪ್ರಮಾಣದ ಚಿನ್ನ ಅಕ್ರಮ ಸಾಗಾಟ ಪತ್ತೆಯಾಗಿತ್ತು.
ನಂತರ ಈ ವರ್ಷ ಫೆಬ್ರವರಿಯಲ್ಲಿ ರನ್ಯಾ ರಾವ್ ಳಿಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಇದೀಗ ಈಗ 89 ಕೋಟಿ ರೂ. ದಂಡ ವಿಧಿಸಿ ಕಸ್ಟಮ್ಸ್ ಇಲಾಖೆ ಅದೇಶ ಹೊರಡಿಸಿದೆ.






