ದಿಲ್ಲಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿಕೆ : ಸಿಪಿಎಂ ಖಂಡನೆ

ಬೆಂಗಳೂರು : ಅಕ್ರಮ ಎಸ್‌ಐಆರ್ ರದ್ದುಪಡಿಸುವಂತೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವಂತೆ ಆಗ್ರಹಿಸಿ ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರಜಾಸತ್ತಾತ್ಮಕ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರಕಾರ ಗೃಹ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಾ ಅಘೋಷಿತ ತುರ್ತು ಪರಿಸ್ಥಿತಿ ಹೇರಿದಂತಾಗಿದೆ ಎಂದು ಸಿಪಿಎಂ ಆರೋಪಿಸಿದೆ.
ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಕಾರ್ಯದರ್ಶಿ ಮಂಡಳಿ ಸದಸ್ಯ ಯು.ಬಸವರಾಜು, ದಿಲ್ಲಿಯ ಸಿಪಿಎಂ ಕೇಂದ್ರ ಕಚೇರಿಯನ್ನು ಪ್ಯಾರಾಮಿಲಿಟರಿ ಪಡೆಗಳು ಸುತ್ತುವರಿದಿರುವುದು ಹಾಗೂ ಪಕ್ಷದ ಪಾಲಿಟ್‌ಬ್ಯೂರೊ ಸದಸ್ಯೆ ಬೃಂದಾ ಕಾರಟ್, ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ.ಎ.ಬೇಬಿ, ಸಂಸದ ಜಾನ್ ಬ್ರಿಟಾಸ್, ರಾಜ್ಯ ಕಾರ್ಯದರ್ಶಿ ಡಾ.ಪ್ರಕಾಶ್ ಕೆ. ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿರುವುದು ಖಂಡನೀಯ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎಸ್‌ಐಆರ್ ವಿರೋಧಿಸಿ ಪ್ರತಿಭಟಿಸುತ್ತಿದ್ದ ಎಸ್‌ಎಫ್‌ಐ, ಎಐಎಸ್‌ಎ, ಎಐಡಿಎಸ್‌ಒ, ಕೆವಿಎಸ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರ ಕ್ರಮವೂ ಖಂಡನೀಯ. ಪ್ರಜಾಸತ್ತಾತ್ಮಕ ಚಳವಳಿಗಳ ಮೇಲಿನ ನಿರ್ಬಂಧಗಳನ್ನು ತಕ್ಷಣ ತೆರವುಗೊಳಿಸಬೇಕು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಹಾಗೂ ಅಕ್ರಮ ಎಸ್‌ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಬಸವರಾಜು ಆಗ್ರಹಿಸಿದ್ದಾರೆ.




