ಜೆಡಿಎಸ್ ಮಹಿಳಾ ಘಟಕದ ನೂತನ ಅಧ್ಯಕ್ಷರ ಪದಗ್ರಹಣ

ಬೆಂಗಳೂರು : ಜಾತ್ಯತೀತ ಜನತಾದಳ(ಜೆಡಿಎಸ್)ಮಹಿಳಾ ಘಟಕದ ನೂತನ ರಾಜ್ಯಾಧ್ಯಕ್ಷೆಯಾಗಿ ರಶ್ಮಿ ರಾಮೇಗೌಡ ಅವರು ನಿಕಟಪೂರ್ವ ಅಧ್ಯಕ್ಷೆ ಲೀಲಾದೇವಿ ಆರ್.ಪ್ರಸಾದ್ ಅವರಿಂದ ಪಕ್ಷದ ಭಾವುಟ ಸ್ವೀಕರಿಸುವ ಮೂಲಕ ಪದಗ್ರಹಣ ಮಾಡಿದರು.
ಸೋಮವಾರ ಇಲ್ಲಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಪದಗ್ರಹಣ ಸಮಾರಂಭ ನಡೆಯಿತು. ಈ ವೇಳೆ ಮಾತನಾಡಿದ ದೇವೇಗೌಡ, ಮಹಿಳಾ ಘಟಕದ ನೂತನ ಅಧ್ಯಕ್ಷರು ಕೋಲಾರ ಜಿಲ್ಲೆಯವರು. ಹೀಗಾಗಿ ಅವರ ನೇತೃತ್ವದಲ್ಲಿ ಮಾ.14 ಅಥವಾ 16ರಂದು ಕೋಲಾರದಲ್ಲಿ ಮಹಿಳಾ ಸಮಾವೇಶ ನಡೆಸಲಾಗುವುದು. ಇದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಒಪ್ಪಿಗೆ ಪಡೆಯುತ್ತೇನೆ ಎಂದು ಹೇಳಿದರು.
ಕೋಲಾರದಲ್ಲಿ ನಮ್ಮ ಶಕ್ತಿ ಹೆಚ್ಚಿದೆ. ಈ ಬಗ್ಗೆ ಸಂಶಯ ಬೇಡ. ಕಳೆದ ಚುನಾವಣೆಯಲ್ಲಿ ಜನ ರಾಜಕೀಯ ಶಕ್ತಿ ಎಷ್ಟು ಕೊಟ್ಟಿದ್ದಾರೆಂದು ನೋಡಿದ್ದೇವೆ. ಚುನಾವಣೆ ಯಾವಾಗ ಬರುತ್ತೋ ಗೊತ್ತಿಲ್ಲ. ನಮ್ಮ ತಯಾರಿ ನಾವು ಮಾಡಿಕೊಳ್ಳೋಣ. ಕೋಲಾರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ಬರುತ್ತಾರೆ. ಲೋಕಸಭೆ ಚುನಾವಣೆ ಪ್ರಚಾರ ಕೋಲಾರದಿಂದಲೇ ಆರಂಭ ಆಗಲಿದೆ. ಜೆಡಿಎಸ್ ಪಕ್ಷದ ಶಕ್ತಿ ಏನಿದೆ ಎಂದು ಸಾಬೀತುಪಡಿಸಬೇಕು. ಬಿಜೆಪಿ ಹಾಗೂ ಜೆಡಿಎಸ್ ಸಂಬಂಧ ಹೇಗಿದೆ ಎಂಬ ಸಂದೇಶ ಕೊಡಬೇಕಿದೆ ಎಂದು ಅವರು ತಿಳಿಸಿದರು.
ಈ ವೇಳೆ ಪಕ್ಷದ ಹಿರಿಯ ನಾಯಕಿ ಸುನೀತಾ ಚೌಹಾಣ್, ರಶ್ಮಿ ರಾಮೇಗೌಡ ಹಾಗೂ ಲೀಲಾದೇವಿ ಆರ್. ಪ್ರಸಾದ್, ಮಹೇಶ್ವರಿ ವಾಲಿ, ರೂತ್ ಮನೋರಮಾ, ರಾಮೇಗೌಡ ಸೇರಿದಂತೆ ಪಕ್ಷದ ಅನೇಕರು ಹಾಜರಿದ್ದರು.







