ಶಿಕ್ಷಣವನ್ನು ರಾಜ್ಯ ಪಟ್ಟಿಗೆ ಸೇರಿಸಿ: ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ ಒತ್ತಾಯ
ಬೆಂಗಳೂರು: ಕೇಂದ್ರ ಸರಕಾರದ ಎನ್‍ಇಪಿ-2020 ನೀತಿಯನ್ನು ರದ್ದುಪಡಿಸಿ, ಶಿಕ್ಷಣವನ್ನು ರಾಜ್ಯ ಪಟ್ಟಿಗೆ ಸೇರಿಸಬೇಕು. ಶಿಕ್ಷಣದ ವ್ಯಾಪಾರೀಕರಣ ತಡೆಗಟ್ಟಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟವು ರಾಷ್ಟ್ರಪತಿಗೆ ಪತ್ರವನ್ನು ಬರೆದಿದೆ.
ಎನ್‍ಇಪಿ-2020 ನೀತಿ ರದ್ದು ಕುರಿತಂತೆ ದೇಶವ್ಯಾಪಿ ವಿದ್ಯಾರ್ಥಿಗಳ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದ್ದು, ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಒಕ್ಕೂಟದ ಚುನಾವಣೆಗಳನ್ನು ನಡೆಸಬೇಕು. ಎಲ್ಲ ಶೈಕ್ಷಣಿಕ ಕ್ಯಾಂಪಸ್‍ಗಳಲ್ಲಿ ಬೋಧಕ ಮತ್ತು ಬೋಧಕೇತರರ ಖಾಲಿ ಹುದ್ದೆಗಳನ್ನು ನಿಯಮಿತವಾಗಿ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದೆ.
ಯುವಕರಿಗೆ ಉದ್ಯೋಗವನ್ನು ಒದಗಿಸಲು ಸಂಸತ್ತು "ಭಗತ್ ಸಿಂಗ್ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯಿದೆ" ಅನ್ನು ಜಾರಿಗೊಳಿಸಬೇಕು. ಕ್ರೀಡಾ ವಿದ್ಯಾರ್ಥಿಗಳಿಗೆ ಮುಕ್ತವಾಗಿ ಪ್ರವೇಶಿಸಬಹುದಾದ ಆಟದ ಮೈದಾನಗಳು, ತರಬೇತುದಾರರು, ಉಪಕರಣಗಳು ಮತ್ತು ಕ್ರೀಡಾ ಸಾಮಗ್ರಿಗಳನ್ನು ಒದಗಿಸಬೇಕು. ಶಿಕ್ಷಣ ಕ್ಷೇತ್ರದಲ್ಲಿ ಮತಾಂದತೆ, ಧರ್ಮಾಂದತೆ ಮತ್ತು ಮೌಡ್ಯಚಾರಣೆ ತುರುಕದೆ ವೈಜ್ಞಾನಿಕ ಮನೋಭಾವ ಬಲಗೊಳಿಸುವ ಪಠ್ಯಕ್ರಮ ರೂಪಿಸಬೇಕು ಎಂದು ಆಗ್ರಹಿಸಿದೆ.
ಭಾರತದ ವಿದ್ಯಾರ್ಥಿಗಳಾದ ನಾವು ಪ್ರಸ್ತುತ ಸನ್ನಿವೇಶದ ಬಿಕ್ಕಟ್ಟಿನಲ್ಲಿ ಸಿಲುಕಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿ 2020, ಹೆಸರಿನ ಶಿಕ್ಷಣದಿಂದ ವಿದ್ಯಾರ್ಥಿಗಳನ್ನು ಹೊರಗಿಡುವ ಸಂಚು ರೂಪಿಸಲಾಗಿದೆ. ಪ್ರತಿ ಹಂತದಲ್ಲೂ, ಅಂಚಿನಲ್ಲಿರುವ ವರ್ಗಗಳ, ದಮನಿತ ಸಮುದಾಯಗಳ ವಿದ್ಯಾರ್ಥಿಗಳನ್ನು ಶಿಕ್ಷಣ ವ್ಯವಸ್ಥೆಯಿಂದ ಹೊರಗಿಡುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ವಿವರಿಸಿದೆ.
ಎನ್‍ಇಪಿ 2020 ಕಾಯಿದೆಯು ಮೇಲ್ವರ್ಗದ ವರ್ಗದ ಹಿಡಿತಕ್ಕೆ ಜ್ಞಾನ ಶಾಖೆಗಳನ್ನು ಹೊಗಲಿವೆ. ಶಿಕ್ಷಣದ ಮೇಲಿನ ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಿ ಕೇಂದ್ರೀಕರಣವನ್ನು ಬಯಸುತ್ತದೆ. ಅಸಮಾನತೆಗಳನ್ನು ಶಾಶ್ವತಗೊಳಿಸಲು ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು, ನಾಶಮಾಡುವ ಗುರಿಯನ್ನು ಎನ್‍ಇಪಿ ಹೊಂದಿದೆ ಎಂದು ಬೇಸರ ವ್ಯಕ್ತಪಡಿಸಿದೆ.







