ಫೆ.10ರಿಂದ ಎರಡು ದಿನಗಳ ಕಾಲ ಭಾರತೀಯ ಗ್ರಂಥಾಲಯ ಸಮ್ಮೇಳನ

ಬೆಂಗಳೂರು: ಇಂಡಿಯನ್ ಲೈಬ್ರರಿ ಕಾಂಗ್ರೆಸ್ ವತಿಯಿಂದ ಫೆ.10 ಮತ್ತು ಫೆ.11ರಂದು ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಎರಡನೆ ಆವೃತ್ತಿಯ ಭಾರತೀಯ ಗ್ರಂಥಾಲಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಸಚಿವ ಪ್ರಿಯಾಂಕ ಖರ್ಗೆ, ಸಚಿವ ಮಧು ಬಂಗಾರಪ್ಪ ಹಾಗೂ ಸಚಿವ ಶಿವರಾಜ ತಂಗಡಗಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಕೇರಳ, ತಮಿಳುನಾಡು, ಪಾಂಡಿಚೆರಿ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಗೋವಾ ರಾಜ್ಯಗಳ ಗ್ರಂಥಾಲಯ ಇಲಾಖೆಯ ಸಚಿವರು ಸಮ್ಮೇಳನಕ್ಕೆ ಆಗಮಿಸಲಿದ್ದಾರೆ ಎಂದರು.
ಜಾಗತಿಕ ಮತ್ತು ಸ್ಥಳೀಯ ಅನುಭವಗಳಿಂದ ಕಲಿಯುವ ಅವಶ್ಯಕತೆಯಿದೆ. ಗ್ರಂಥಾಲಯಗಳು ಸಾಮೂಹಿಕ ಕಲಿಕೆಯ ಸ್ಥಳಗಳಾಗಿ ಹೊರಹೊಮ್ಮಬೇಕಾಗಿದೆ. ಇಂಡಿಯನ್ ಲೈಬ್ರರಿ ಕಾಂಗ್ರೆಸ್ ಅಂಚಿನಲ್ಲಿರುವ ಮತ್ತು ವಂಚಿತ ವಿಭಾಗಗಳು ಮತ್ತು ಪ್ರದೇಶಗಳಿಗೆ ಅನುಕೂಲವಾಗುವಂತೆ ಗ್ರಂಥಾಲಯಗಳನ್ನು ಸ್ಥಾಪಿಸುವ ಆಂದೋಲನವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ ಎಂದರು.
ಸಮ್ಮೇಳನದಲ್ಲಿ ವೃತ್ತಿಪರರು, ಶಿಕ್ಷಕರು, ಉಪನ್ಯಾಸಕರು, ಗ್ರಂಥಪಾಲಕರು, ವಿದ್ಯಾರ್ಥಿಗಳು, ಸಂಶೋಧಕರು, ಜನಪ್ರತಿನಿಧಿಗಳು, ಬರಹಗಾರರು, ಪತ್ರಕರ್ತರು ಸೇರಿದಂತೆ ಕಲಾವಿದರು ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ಗ್ರಂಥಾಲಯ ಬಲವರ್ಧನೆ, ಅನುಭವ ಹಂಚಿಕೆ, ಸಂಪನ್ಮೂಲಗಳು, ಅನುಭವ ಹಂಚಿಕೆ ಮುಂತಾದ ವಿಷಯಗಳ ಬಗ್ಗೆ ಗೋಷ್ಠಿಗಳು ನಡೆಯಲಿವೆ. ಮೊದಲ ಇಂಡಿಯನ್ ಲೈಬ್ರರಿ ಕಾಂಗ್ರೆಸ್ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಈಗ ಎರಡನೆ ಆವೃತ್ತಿಯ ಸಮ್ಮೇಳನ ನಗರದಲ್ಲಿ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಸ್ವಾಗತ ಸಮಿತಿ ಸಂಚಾಲಕ ಈ. ಬಸವರಾಜು ಮಾತನಾಡಿ, ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವವರು ಪ್ರತಿನಿಧಿ ಶುಲ್ಕ ಪಾವತಿಸಿ ನೊಂದಾಯಿಸಿಕೊಳ್ಳಬೇಕು. ವಿವಿ ಹಾಗೂ ಪದವಿ ಕಾಲೇಜುಗಳ ಪ್ರತಿನಿಧಿಗಳಿಗೆ 2 ಸಾವಿರ ರೂ., ಸಾರ್ವಜನಿಕ ಗ್ರಂಥಾಲಯ, ಗ್ರಾ.ಪಂ.ಗ್ರಂಥಾಲಯಗಳ ಪ್ರತಿನಿಧಿಗಳಿಗೆ 1 ಸಾವಿರ ರೂ.ಹಾಗೂ ಆಸಕ್ತ ಸಾರ್ವಜನಿಕರಿಗೆ 500 ರೂ.ಪ್ರತಿನಿಧಿ ಶುಲ್ಕವಿರುತ್ತದೆ. ಪ್ರತಿನಿಧಿಗಳಿಗೆ ಊಟ, ವಸತಿ ಹಾಗೂ ಕಿಟ್ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ; 94489 57666ಗೆ ಸಂಪರ್ಕಿಸಬಹುದು ಎಂದರು. ಗೋಷ್ಟಿಯಲ್ಲಿ ಶಾಸಕ ಬಿ.ಆರ್. ಪಾಟೀಲ್, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಎಸ್.ಎಸ್. ಹೊಸಮನಿ, ರವೀಂದ್ರನಾಥ ಸಿರಿವರ ಮತ್ತಿತರರು ಇದ್ದರು.







