ಇನ್ಫೋಸಿಸ್ ವಿರುದ್ಧ ಕೆಐಎಡಿಬಿಯಿಂದ ಪಡೆದ ಬಹುಕೋಟಿ ಮೌಲ್ಯದ ಭೂಮಿ ಮಾರಾಟ ಆರೋಪ; ಕಾನೂನು ಕ್ರಮ ಜರುಗಿಸಲು ಆಗ್ರಹ

Photo credit: PTI
ಬೆಂಗಳೂರು : ಉದ್ಯಮ ನೆಪದಲ್ಲಿ ಕೆಐಎಡಿಬಿಯಿಂದ ಭೂಮಿ ಪಡೆದ ಬಳಿಕ ರಿಯಲ್ ಎಸ್ಟೇಟ್ ಸಂಸ್ಥೆ ಪುರವಂಕರಕ್ಕೆ 250 ಕೋಟಿ ರೂ.ಗೆ ಇನ್ಫೋಸಿಸ್ ಮಾರಾಟ ಒಪ್ಪಂದ ಮಾಡಿಕೊಂಡಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ರಾಜ್ಯ ಸರಕಾರ ಕಾನೂನು ಕ್ರಮ ಜರುಗಿಸಬೇಕೆಂದು ಪ್ರಗತಿಪರ ಹೋರಾಟಗಾರರು, ಚಿಂತಕರು ಆಗ್ರಹಿಸಿದ್ದಾರೆ.
ಶನಿವಾರ ಈ ಕುರಿತು ಪ್ರತಿಕ್ರಿಯಿಸಿರುವ ಸಾಮಾಜಿಕ ಹೋರಾಟಗಾರ್ತಿ ಕವಿತಾ ರೆಡ್ಡಿ, ಹಲವು ವರ್ಷಗಳ ಹಿಂದೆ ಕೆಐಎಡಿಬಿಯಿಂದ ಕಡಿಮೆ ಬೆಲೆಗೆ ಭೂಮಿಯನ್ನು ಪಡೆದುಕೊಂಡಿದ್ದ ಇನ್ಫೋಸಿಸ್ ಈ ರೀತಿ ವಂಚನೆ ಮಾಡಿರುವ ಮಾಹಿತಿ ನೋಡಿ ಅಚ್ಚರಿಯಾಗಿದ್ದೇನೆ. ಸದಾ ರೈತರನ್ನು ಟೀಕಿಸುವ ಉದ್ಯಮಿಗಳು ಈಗ ಇದರ ವಿರುದ್ಧ ಮಾತನಾಡಲಿ ಎಂದಿದ್ದಾರೆ.
ರಾಜ್ಯದಲ್ಲಿ ಉದ್ಯೋಗ ಮತ್ತು ಹೂಡಿಕೆಯ ಭರವಸೆ ನೀಡಿ ಹಲವಾರು ವರ್ಷಗಳಿಂದ ಕೆಐಎಡಿಬಿಯಿಂದ ಭೂಮಿಯನ್ನು ಕಸಿದುಕೊಂಡಿದ್ದರು. ಈಗ ಅದೇ ಭೂಮಿಯನ್ನು 250 ಕೋಟಿ ರೂ.ಗೆ ಮಾರಾಟ ಮಾಡಲು ರಿಯಲ್ ಎಸ್ಟೇಟ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದ್ದು, ಈಗ ಇನ್ಫೋಸಿಸ್ ಅನ್ನು ಏನೆಂದು ಕರೆಯಬೇಕು ಎಂದು ಕೇಳಿದ್ದಾರೆ.
ಅದೇ ರೀತಿ, ಆನೇಕಲ್ನ ಕೆಐಎಡಿಬಿಯಿಂದ ಹಲವು ವರ್ಷಗಳ ಹಿಂದೆಯೇ ಇನ್ಫೋಸಿಸ್ಗೆ ಮಂಜೂರು ಮಾಡಲಾಗಿದ್ದ 53.5 ಎಕರೆ ಭೂಮಿಯನ್ನು ರಿಯಲ್ ಎಸ್ಟೇಟ್ ಸಂಸ್ಥೆ ಪುರವಂಕರಕ್ಕೆ 250 ಕೋಟಿ ರು.ಗೆ ಮಾರಾಟ ಒಪ್ಪಂದ ಮಾಡಿಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ. ಎಕ್ಸ್ನಲ್ಲಿ ನೆಟ್ಟಿಗರು ಇನ್ಫೋಸಿಸ್ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.







