ಬೆಂಗಳೂರಿನಲ್ಲಿ 1,154 ಮಸಾಜ್ ಪಾರ್ಲರ್, ಸ್ಪಾ ಕೇಂದ್ರಗಳ ಪರಿಶೀಲನೆ: ನಿಯಮ ಉಲ್ಲಂಘನೆಯಡಿ 91 ನೋಟಿಸ್ ಜಾರಿಗೊಳಿಸಿದ ಪೊಲೀಸರು

ಸಾಂದರ್ಭಿಕ ಚಿತ್ರ
ಬೆಂಗಳೂರು : ಸಾರ್ವಜನಿಕ ಸುರಕ್ಷತಾ ನಿಯಮಗಳ ಉಲ್ಲಂಘನೆ ಆರೋಪದ ಮೇಲೆ ಬೆಂಗಳೂರು ನಗರ ಪೊಲೀಸರು ಬೃಹತ್ ವಿಶೇಷ ಪರಿಶೀಲನಾ ಕಾರ್ಯಾಚರಣೆ ಕೈಗೊಂಡು ರವಿವಾರ ನಗರಾದ್ಯಂತ ಒಟ್ಟು 1,154 ಮಸಾಜ್ ಪಾರ್ಲರ್ ಗಳು ಮತ್ತು ಸ್ಪಾ ಕೇಂದ್ರಗಳನ್ನು ಪರಿಶೀಲಿಸಿದ್ದು, ಒಟ್ಟು 91 ನೋಟಿಸ್ಗಳನ್ನು ಜಾರಿ ಮಾಡಿರುವುದಾಗಿ ವರದಿಯಾಗಿದೆ.
ಬೆಂಗಳೂರು ನಗರದ ಮಸಾಜ್ ಪಾರ್ಲರ್ ಗಳು ಹಾಗೂ ಸ್ಪಾ ಕೇಂದ್ರಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಮತ್ತು ಸಿಬ್ಬಂದಿ ಮತ್ತು ಗ್ರಾಹಕರ ಸುರಕ್ಷತೆ ಮತ್ತು ಹಕ್ಕುಗಳ ರಕ್ಷಣೆಯನ್ನು ಖಾತರಿಪಡಿಸುವ ಉದ್ದೇಶದಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಹಿತೇಂದ್ರ ಅವರ ನೇತೃತ್ವದಲ್ಲಿ ಈ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಜಂಟಿ ಪೊಲೀಸ್ ಆಯುಕ್ತರು ಮತ್ತು ಸಂಚಾರ, ರೌಡಿ ನಿಗ್ರಹ ದಳ, ಅಪರಾಧ ನಿಯಂತ್ರಣ ವಿಭಾಗದ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಮೇಲ್ವಿಚಾರಣೆಯಲ್ಲಿ ಮಸಾಜ್ ಪಾರ್ಲರ್ ಗಳು ಹಾಗೂ ಸ್ಪಾ ಕೇಂದ್ರಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು ನಗರ ಕೇಂದ್ರ ವಿಭಾಗದಲ್ಲಿ 112 ಕೇಂದ್ರಗಳನ್ನು ತಪಾಸಣೆ ನಡೆಸಿ, ನಾಲ್ಕು ಉಲ್ಲಂಘನೆಗಳನ್ನು ಪತ್ತೆ ಹಚ್ಚಿ ನಾಲ್ಕು ನೋಟಿಸ್ಗಳನ್ನು ನೀಡಲಾಗಿದೆ. ಉತ್ತರ ವಿಭಾಗದಲ್ಲಿ 250 ಕೇಂದ್ರಗಳನ್ನು ಪರಿಶೀಲಿಸಿ 26 ನೋಟಿಸ್ಗಳನ್ನು ಜಾರಿ ಮಾಡಲಾಗಿದೆ. ಪೂರ್ವ ವಿಭಾಗದಲ್ಲಿ 191 ಕೇಂದ್ರಗಳನ್ನು ಪರಿಶೀಲಿಸಿ 61 ನೋಟಿಸ್ಗಳನ್ನು ನೀಡಲಾಗಿದೆ. ಪಶ್ಚಿಮ ವಿಭಾಗದಲ್ಲಿ 224 ಹಾಗೂ ದಕ್ಷಿಣ ವಿಭಾಗದಲ್ಲಿ 289 ಕೇಂದ್ರಗಳನ್ನು ಪರಿಶೀಲಿಸಲಾಗಿದ್ದು, ಯಾವುದೇ ಉಲ್ಲಂಘನೆಗಳು ಅಥವಾ ನೋಟಿಸ್ಗಳು ವರದಿಯಾಗಿಲ್ಲ. ರೌಡಿ ನಿಗ್ರಹ ದಳ ವಿಭಾಗವು 88 ಕೇಂದ್ರಗಳನ್ನು ಪರಿಶೀಲಿಸಿ ಏಳು ಉಲ್ಲಂಘನೆಗಳನ್ನು ಪತ್ತೆಹಚ್ಚಿದೆ ಎಂದು ಪೊಲೀಸ್ ಅಧಿಕಾರಿ ಮೂಲಗಳು ಮಾಹಿತಿ ನೀಡಿವೆ.
ನಗರಾದ್ಯಂತ ಒಟ್ಟು 1,154 ಕೇಂದ್ರಗಳ ಪರಿಶೀಲನೆಯಲ್ಲಿ 11 ಉಲ್ಲಂಘನೆಗಳು ಪತ್ತೆಯಾಗಿದ್ದು, 91 ನೋಟಿಸ್ಗಳನ್ನು ನೀಡಲಾಗಿದೆ. ಮಸಾಜ್ ಪಾರ್ಲರ್ಗಳು ಮತ್ತು ಸ್ಪಾ ಕೇಂದ್ರಗಳು ಸುರಕ್ಷಿತ ಹಾಗೂ ಕಾನೂನು ಬದ್ಧ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವುದನ್ನು ಖಚಿತಪಡಿಸುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ. ಸ್ಪಾ ಮಾಲಕರು, ಸಿಬ್ಬಂದಿ ಮತ್ತು ಗ್ರಾಹಕರ ಹಕ್ಕುಗಳನ್ನು ಸಮಾನವಾಗಿ ರಕ್ಷಿಸುವುದು ಹಾಗೂ ಅನ್ವಯವಾಗುವ ಸಾರ್ವಜನಿಕ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡುವುದು ಪೊಲೀಸರ ಉದ್ದೇಶವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.






