ಅನುಭವ ಮಂಟಪ ಕಾಮಗಾರಿಗೆ 50 ಕೋಟಿ ಬಿಡುಗಡೆ : ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು, ಅ.9: ಬಸವ ಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ಅನುಭವ ಮಂಟಪ ಕಾಮಗಾರಿಗೆ ಸಂಬಂಧಿಸಿದಂತೆ 50 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಸವಕಲ್ಯಾಣಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮುಂದಿನ ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವುದಾಗಿ ಘೋಷಿಸಿದ್ದರು. ಅದರಂತೆ ಕಾಮಗಾರಿ ಭರದಿಂದ ಸಾಗಿದ್ದು 50 ಕೋಟಿ ರೂ.ಗಳನ್ನು ಜಿಲ್ಲಾಧಿಕಾರಿಗಳ ಖಾತೆಗೆ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ಸುಮಾರು 700 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಅನುಭವ ಮಂಟಪ ಭವ್ಯ, ದಿವ್ಯವಾಗಿ ನಿರ್ಮಾಣವಾಗುತ್ತಿದ್ದು, ಬಸವಾದಿ ಶರಣರ ಕೊಡುಗೆಯನ್ನು ಇಡೀ ವಿಶ್ವಕ್ಕೇ ಸಾರಲಿದೆ. ಇಷ್ಟಲಿಂಗ ಪೂಜೆಯ ವೈಜ್ಞಾನಿಕ ಅಂಶಗಳೂ ಇಲ್ಲಿದ್ದು, ಜಗತ್ತಿನಾದ್ಯಂತದ ಪ್ರವಾಸಿಗರನ್ನು ತನ್ನತ್ತ ಸೆಳೆಯಲಿದೆ ಎಂದು ಅವರು ಹೇಳಿದರು.
ಆಧುನಿಕ ಅನುಭವ ಮಂಟಪದಲ್ಲಿರುವ 770 ಕಂಬಗಳ ಮೇಲೆ 770 ಅಮರ ಗಣಂಗಳ ವಚನಗಳನ್ನು ಕೆತ್ತಲಾಗಿದೆ ಎಂದೂ ಅವರು ಉಲ್ಲೇಖಿಸಿದರು.





