ವಿಬಿ-ಜಿ ರಾಮ್ ಜಿ ಯೋಜನೆ; 1.60 ಕೋಟಿ ಮಾನವ ದಿನ ಸೃಷ್ಟಿಸಲಾಗುತ್ತಿದೆ : ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು : ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇರುವುದರಿಂದ ವಿಬಿ-ಜಿ ರಾಮ್ ಜಿ ಯೋಜನೆಯಡಿ 1.60 ಕೋಟಿ ಮಾನವ ದಿನಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ನಡೆದ ಬರ ಕುರಿತ ವಿಶೇಷ ಚರ್ಚೆಯಲ್ಲಿ ಬಿಜೆಪಿ ಸದಸ್ಯ ವಿ. ಸುನೀಲ್‍ಕುಮಾರ್ ವಿಬಿ-ಜಿ ರಾಮ್ ಜಿ ಯೋಜನೆಯನ್ನು ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳಲು ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಆದರೆ ಆ ಕಾರ್ಯವಾಗಿಲ್ಲ ಎಂದಾಗ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ಕೃಷಿ ಹೊಂಡ, ಚೆಕ್ ಡ್ಯಾಂ ನಿರ್ಮಾಣ, ಕೆರೆಗಳ ಹೂಳೆತ್ತುವುದು, ಕೆರೆಗಳ ಪುನಶ್ಚೇತನ, ಅಂತರ್ಜಲ ಹೆಚ್ಚಳದಂತಹ ಕಾಮಗಾರಿಗಳು ಸೇರಿದಂತೆ 318 ಕಾಮಗಾರಿಗಳನ್ನು ಈ ವರ್ಷ ವಿಬಿ-ಜಿರಾಮ್‍ಜಿ ಯೋಜನೆಯಡಿ ಕೈಗೊಳ್ಳಲಾಗುತ್ತಿದೆ ಎಂದರು.
ಮನರೇಗಾ ಯೋಜನೆಯನ್ನು ಬದಲಾಯಿಸಿ ಕೇಂದ್ರ ಸರಕಾರ ನೀಡುವ ಅನುದಾನವನ್ನು ಕಡಿತಗೊಳಿಸಿದೆ. ಆದರೆ ಯಾರೂ ಗುಳೆ ಹೋಗದಂತೆ ರಾಜ್ಯ ಸರಕಾರ ಜನರಿಗೆ ಉದ್ಯೋಗ ನೀಡಲು ಕ್ರಮ ಕೈಗೊಂಡಿದ್ದು ಎಸ್‍ಓಪಿಯನ್ನು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ ಎಂಬ ಆರೋಪ ಸರಿಯಲ್ಲ ಎಂದು ಸಚಿವರು ಹೇಳಿದರು.




