ಸರಕಾರಿ, ಅರಣ್ಯ ಜಾಗದ ಆಸ್ತಿಯನ್ನು ತೆರಿಗೆಯಿಂದ ಹೊರಗಿಡುವ ಸುತ್ತೋಲೆಗೆ ತಡೆ : ಈಶ್ವರ್ ಖಂಡ್ರೆ

ಬೆಂಗಳೂರು : ತೆರಿಗೆ ನಿರ್ಧರಣೆ ಹಾಗೂ ಇ-ಸ್ವತ್ತು 2.0 ತಂತ್ರಾಂಶದಿಂದ ಸರಕಾರಿ ಮತ್ತು ಅರಣ್ಯ ಭೂಮಿಯಲ್ಲಿನ ಆಸ್ತಿಗಳನ್ನು ಕೈಬಿಡುವ ಬಗ್ಗೆ ಕಳೆದ ಆ.13ರಂದು ಹೊರಡಿಸಲಾಗಿರುವ ಸುತ್ತೋಲೆಗೆ ತಾತ್ಕಾಲಿಕ ತಡೆ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ವಿಧಾನಮಂಡಲದ ಉಭಯ ಸದನಗಳಲ್ಲಿ ಅನುಮೋದನೆಯಾಗಿದ್ದ ಹಾಗೂ ರಾಜ್ಯಪಾಲರ ಅಂಗೀಕಾರ ಪಡೆದಿದ್ದ ಕಾಯಿದೆಗೆ ಸಂಬಂಧಿಸಿದಂತೆ ಈ ಸುತ್ತೋಲೆಯನ್ನು ಇಲಾಖೆ ವತಿಯಿಂದ ಹೊರಡಿಸಲಾಗಿತ್ತು ಎಂದರು.
ಆದರೆ ಕಸ್ತೂರಿ ರಂಗನ್ ವರದಿಯ ಮೇಲಿನ ಚರ್ಚೆಯ ವೇಳೆ ವಿಶೇಷ ಅಧಿವೇಶನದಲ್ಲಿ ಹಲವು ಜನಪ್ರತಿನಿಧಿಗಳು ಪಕ್ಷಾತೀತವಾಗಿ ಈ ಸುತ್ತೋಲೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸದನದಲ್ಲಿ ಭರವಸೆ ನೀಡಿದಂತೆ ಆ.13ರ ಸುತ್ತೋಲೆಗೆ ತಡೆ ನೀಡಲಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಕಾಡಿನಂಚಿನಲ್ಲಿರುವ ಮತ್ತು ಸರಕಾರಿ ಭೂಮಿಯಲ್ಲಿ ಈಗಾಗಲೇ ಮನೆ ಕಟ್ಟಿಕೊಂಡು ವಾಸಿಸುತ್ತಿರುವವರು ಆತಂಕಪಡುವ ಅಗತ್ಯವಿಲ್ಲ. ಕಂದಾಯ, ಅರಣ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿದಂತೆ ಬಹು ಇಲಾಖೆಯ ಅಧಿಕಾರಿಗಳ ಉನ್ನತಮಟ್ಟದ ಸಮಿತಿ ರಚಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅವರು ಹೇಳಿದರು.
ಈ ಸಂಬಂಧ ಇಂದು ಎಲ್ಲ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದು, ಮುಂದಿನ ಆದೇಶದವರೆಗೆ ಆ.13ರ ಸುತ್ತೋಲೆಗೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆ ಕೈಗೊಳ್ಳದಿರಲು ಸೂಚಿಸಲಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.






