ಕ್ಷೇತ್ರ ಪುನರ್ ವಿಂಗಡಣೆ ಮಸೂದೆ | ಮುಖ್ಯಮಂತ್ರಿಗಳು ಹಾಗೂ ಸರ್ವಪಕ್ಷ ಸಭೆ ನಡೆಸದೆ ಕೇಂದ್ರದ ಸರ್ವಾಧಿಕಾರಿ ಧೋರಣೆ : ಈಶ್ವರ್ ಖಂಡ್ರೆ

ಬೆಂಗಳೂರು : ಬಿಜೆಪಿ 2024ರ ಲೋಕಸಭಾ ಚುನಾವಣೆಯಲ್ಲಿ ಅನುಭವಿಸಿದ ಹಿನ್ನಡೆ, ಈಗ ಝೆನ್ ಜಿಗಳ ಪ್ರತಿಭಟನೆ ಹಾಗೂ ರಾಹುಲ್ ಗಾಂಧಿ ಅವರ ಜನಪ್ರಿಯತೆಯಿಂದ ವಿಚಲಿತವಾಗಿದ್ದು, ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಕ್ಷೇತ್ರ ಪುನರ್ ವಿಂಗಡಣೆಗೆ ಕೈಹಾಕಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ರವಿವಾರ ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ(ಎಸ್.ಐ.ಆರ್) ಹೆಸರಿನಲ್ಲಿ 14 ಕೋಟಿ ಅರ್ಹ ಮತದಾರರ ಮತದಾನದ ಹಕ್ಕನ್ನೆ ಕಸಿದು, ಬಿಜೆಪಿ ನೇತೃತ್ವದ ಎನ್.ಡಿ.ಎ. ಸರಕಾರ ಹಲವು ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ ಎಂದು ಅವರು ಟೀಕಿಸಿದ್ದಾರೆ.
ಈಗ ಮುಂದಿನ ವರ್ಷ ನಡೆಯಲಿರುವ 5 ರಾಜ್ಯಗಳ ಚುನಾವಣೆ ಮತ್ತು 2028ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ಹಾಗೂ 2029ರ ಲೋಕಸಭಾ ಚುನಾವಣೆ ಸೋಲಿನ ಭೀತಿಯಿಂದ ಕ್ಷೇತ್ರ ಪುನರ್ ವಿಂಗಡಣೆಗೆ ಮುಂದಾಗಿದೆ ಎಂದು ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
ಶ್ರೀಸಾಮಾನ್ಯನ ಮತದಾನದ ಹಕ್ಕು ಕಸಿದುಕೊಳ್ಳುತ್ತಿರುವ ಕೇಂದ್ರ ಸರಕಾರ ಹಾಗೂ ಮುಖ್ಯ ಚುನಾವಣಾ ಆಯುಕ್ತರ ಏಕಪಕ್ಷೀಯ ನಡೆಯ ವಿರುದ್ಧ ಈಗ ದೇಶಾದ್ಯಂತ ಜನಾಕ್ರೋಶ ಬೆಳೆಯುತ್ತಿದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಧೋರಣೆಯ ವಿರುದ್ಧ ಇಡೀ ದೇಶದ ಯುವ ಜನರು ಸಿಡಿದೆದ್ದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮುಂಬರುವ ಚುನಾವಣೆಗಳಲ್ಲಿನ ಸೋಲಿನ ಭೀತಿಯಿಂದ ಈಗ ಬಿಜೆಪಿ ಹೊಸ ತಂತ್ರ ಮಾಡುತ್ತಿದೆ, ಕೂಡಲೇ ಕ್ಷೇತ್ರ ಪುನರ್ ವಿಂಗಡಣೆ ಮಸೂದೆ ಮಂಡನೆಯಿಂದ ಹಿಂದೆ ಸರಿಯಬೇಕು ಎಂದು ಕೇಂದ್ರ ಸರಕಾರವನ್ನು ಈಶ್ವರ್ ಖಂಡ್ರೆ ಒತ್ತಾಯಿಸಿದ್ದಾರೆ.
2021ರಲ್ಲಿ ಕೋವಿಡ್ ಇತ್ತು. ಆದರೆ ನಂತರ 5 ವರ್ಷವಾದರೂ ಜನಗಣತಿ ನಡೆಸದೆ ಹಳೆಯ ಜನಗಣತಿ ಅಂಕಿ ಸಂಖ್ಯೆ ಇಟ್ಟುಕೊಂಡು ಕ್ಷೇತ್ರ ಪುನರ್ ವಿಂಗಡಣೆಗೆ ಮುಂದಾಗಿರುವ ಕೇಂದ್ರ ಸರಕಾರ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಮಾಡಲು ಹೊರಟಿದೆ. ಇದು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ.
ದಕ್ಷಿಣ ಭಾರತದ ರಾಜ್ಯಗಳು ಜನಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ರಾಷ್ಟ್ರದ ಪ್ರಗತಿಗೆ ಪೂರಕವಾದವು. ಉತ್ತಮ ಕಾರ್ಯ ಮಾಡಿದ್ದಕ್ಕಾಗಿ ಈಗ ದಕ್ಷಿಣ ರಾಜ್ಯಗಳಿಗೆ ಕೇಂದ್ರ ಸರಕಾರ ಘೋರ ಅನ್ಯಾಯ ಮಾಡುತ್ತಿದೆ. ಲೋಕಸಭಾ ಕ್ಷೇತ್ರಗಳನ್ನು ಪುನರ್ ವಿಂಗಡಿಸಿದರೆ ಅಥವಾ ಹಾಲಿ ಇರುವ ಕ್ಷೇತ್ರಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಳ ಮಾಡಿದರೂ ಅನ್ಯಾಯವೆ ಆಗುವ ಸಾಧ್ಯತೆಯೆ ಹೆಚ್ಚು. ಕ್ಷೇತ್ರ ಪುನರ್ ವಿಂಗಡಣೆಯ ನಿಜವಾದ ಅರ್ಥವನ್ನೆ ಇದು ನಾಶ ಮಾಡುತ್ತದೆ ಎಂದು ಈಶ್ವರ್ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ದೇಶದ ಎಲ್ಲ ರಾಜ್ಯಗಳಿಗೂ ಸಂಬಂಧಿಸಿದ, ಎಲ್ಲ ಪಕ್ಷಗಳಿಗೂ ಸಂಬಂಧಿಸಿದ ರಾಷ್ಟ್ರ ರಾಜಕಾರಣದ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರುವಂತಹ ಸಾಂವಿಧಾನಿಕ ತಿದ್ದುಪಡಿ ತರುವ ಮುನ್ನ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ಸರಕಾರ ಸಭೆ ನಡೆಸಬೇಕಿತ್ತು. ಕನಿಷ್ಠ ಸರ್ವಪಕ್ಷ ಸಭೆಯನ್ನಾದರೂ ಕರೆದು ಸಮನ್ವಯ ಸಾಧಿಸಬೇಕಿತ್ತು. ಆದರೆ, ಈ ವಿಚಾರದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರ ಸರ್ವಾ ಧಿಕಾರಿಯಂತೆ ವರ್ತಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಲಿ ಇರುವ 543 ಲೋಕಸಭಾ ಕ್ಷೇತ್ರಗಳನ್ನು 850ಕ್ಕೆ ಹೆಚ್ಚಿಸುವ ಪ್ರಯತ್ನ ಬಿಟ್ಟು, ಈಗಾಗಲೇ ಅಂಗೀಕಾರ ಆಗಿರುವ ಮಹಿಳಾ ಮೀಸಲಾತಿ ಕಾಯಿದೆಯನ್ನು ತಕ್ಷಣವೇ ಜಾರಿಗೆ ತರಲಿ. ಅದು ಬಿಟ್ಟು ವೋಟ್ ಚೋರಿ ನಂತರ, ಕ್ಷೇತ್ರ ಚೋರಿ ಮಾಡುವ ಷಡ್ಯಂತ್ರ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾಡುವ ದ್ರೋಹ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.






