ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಇಡುವ ಕಪ್ಪುಚುಕ್ಕೆಯನ್ನೇ ದೃಷ್ಟಿ ಬೊಟ್ಟಾಗಿ ಬದಲಿಸುತ್ತೇವೆ: ಈಶ್ವರಾನಂದಪುರಿ ಸ್ವಾಮೀಜಿ

ಬೆಂಗಳೂರು : ‘ನಾಲ್ಕು ದಶಕಗಳಿಂದ ರಾಜಕೀಯದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡುವ ವ್ಯಕ್ತಿತ್ವ ಬೆಳೆಸಿಕೊಂಡವರಲ್ಲ. ಆದರೆ, ಅವರಿಗೆ ಕಪ್ಪುಚುಕ್ಕೆ ಇಡುವ ಪ್ರಯತ್ನ ಆಗುತ್ತಿದ್ದು, ನಾವು ಆ ಚುಕ್ಕೆಯನ್ನು ಅವರಿಗೆ ದೃಷ್ಟಿ ಬೊಟ್ಟಾಗಿ ಬದಲಿಸುತ್ತೇವೆ’ ಎಂದು ಹೊಸದುರ್ಗದ ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದ್ದಾರೆ.
ಸೋಮವಾರ ಇಲ್ಲಿನ ವಿಜಯನಗರದ ಬಂಟರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನಕ ಚೇತನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಮುಡಾದವರು ಸೈಟ್‍ಗಳನ್ನು ಬೇಕಾದರೆ ವಾಪಸ್ ಪಡೆಯಲಿ. ಯಾವ ಯಾವ ರಾಜಕಾರಣಿಗಳು ಎಷ್ಟು ಆಸ್ತಿ ಮಾಡಿದ್ದಾರೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪಿತೂರಿ ಸಲ್ಲದು ಎಂದು ಆಕ್ಷೇಪಿಸಿದರು.
ಒಂದು ಸಮಾಜದಲ್ಲಿ ಎಷ್ಟು ಜನ ಶಿಕ್ಷಣವಂತರಿದ್ದಾರೆ ಎಂಬುದರ ಮೇಲೆ ಆ ಸಮಾಜ ಎಷ್ಟು ಬೆಳವಣಿಗೆ ಕಂಡಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯಬಹುದು. ಜ್ಞಾನ ಒಂದು ಸಮುದಾಯದ ಸ್ವತ್ತಲ್ಲ, ಎಲ್ಲರ ಸ್ವತ್ತು ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ಭಕ್ತರು ನಮ್ಮ ಜೋಳಿಗೆ ತುಂಬಿಸಿದರೆ ಮಾತ್ರ ನಾವು ಬಡ ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ಶ್ರಮಿಸಲು ಸಾಧ್ಯ ಎಂದು ಅವರು ತಿಳಿಸಿದರು.
ಗುಲ್ಬಾರ್ಗ ವಿಭಾಗದ ತಿಂಥಣಿ ಬ್ರಿಜ್‍ನ ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾಮಠದ ಸಿದ್ದರಾಮಾನಂದಪುರಿ ಮಾತನಾಡಿ, ಭ್ರಷ್ಟಾಚಾರ ಯುಗದಲ್ಲಿ ಪ್ರಾಮಾಣಿಕನಾಗಿ ಉಳಿಯುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸುವ ಸಂದಿಗ್ಧ ಪರಿಸ್ಥಿತಿ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೀಗೆ ಭ್ರಷ್ಟಚಾರ ಕಳಂಕ ಹಚ್ಚಲು ಪ್ರಯತ್ನಿಸಲಾಗುತ್ತಿದೆ. ಹಲವು ಸಮುದಾಯಗಳ ಪ್ರಗತಿಗಾಗಿ ಶ್ರಮಿಸುವ ಇವರ ಹಿಂದೆ ಸಾಕಷ್ಟು ಸಮಾಜಗಳು ಬೆನ್ನೆಲುಬಾಗಿ ಸದಾ ನಿಲ್ಲಲ್ಲಿವೆ ಎಂದು ಹೇಳಿದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಹಾಗೂ ಸಮಾಜ ಸೇವಕರಿಗೆ ಕನಕ ಚೇತನ ಪ್ರಶಸ್ತಿ, ಕುರುಬ ಸಮಾಜದ ಶೇ.90 ರಷ್ಟು ಅಂಕಗಳಿಸಿದ ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಇದೇ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಸೇರಿದಂತೆ ಮತ್ತಿತರರು ಇದ್ದರು.







