ಜನಸಾಮಾನ್ಯರಿಗೆ ‘ಜಲ ಭಾಗ್ಯ’ದ ಅಗತ್ಯವಿದೆ : ಎಸ್.ಎ.ಹುಸೇನ್

ಬೆಂಗಳೂರು : ರಾಜ್ಯ ಸರಕಾರವು ಮಹಿಳೆಯರಿಗೆ ‘ಗೃಹಲಕ್ಷ್ಮೀ’ ಗ್ಯಾರಂಟಿ ಯೋಜನೆಯಡಿ ಮಾಸಿಕ 2 ಸಾವಿರ ರೂ.ಗಳನ್ನು ನೀಡುತ್ತಿದೆ. ಆದರೆ, ಮತ್ತೊಂದೆಡೆ ರಾಜಧಾನಿ ಬೆಂಗಳೂರಿನಲ್ಲಿ ಬಡ ಕುಟುಂಬದ ಮಹಿಳೆಯರು ನೀರಿಗಾಗಿ ಮಾಸಿಕ 3 ಸಾವಿರ ರೂ. ಗಳನ್ನು ಖರ್ಚು ಮಾಡಬೇಕಾದ ಪರಿಸ್ಥಿತಿಯಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ‘ಜಲಸತ್ಯಾಗ್ರಹ ಚಳವಳಿ’ಯ ಸಂಸ್ಥಾಪಕ ಎಸ್.ಎ.ಹುಸೇನ್ ತಿಳಿಸಿದರು.
ಸೋಮವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ನೀರನ್ನು ಉತ್ಪಾದನೆ ಮಾಡಲು ಸಾಧ್ಯವಿಲ್ಲ. ನೈಸರ್ಗಿಕವಾಗಿ ಲಭ್ಯವಾಗುವ ನೀರು ಈಗಾಗಲೆ ಒಂದು ಹಂತದಲ್ಲಿ ಮಾರಾಟದ ಸರಕಾಗಿ ಬದಲಾಗಿದೆ. ನೀರಿನ ಮಹತ್ವವನ್ನು ಅರಿಯದಿದ್ದರೆ ಭವಿಷ್ಯದಲ್ಲಿ ಜನ ಸಾಮಾನ್ಯರು ‘ಜಲ ಕಂಟಕ’ವನ್ನು ಎದುರಿಸುವುದು ನಿಶ್ಚಿತ ಎಂದು ಹೇಳಿದರು.
ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆಯಿದೆ. ಬೆಂಗಳೂರು ಜಲಮಂಡಳಿ 1,470 ಎಂಎಲ್‍ಡಿ ಕಾವೇರಿ ನೀರು ಸರಬರಾಜು ಮಾಡುತ್ತದೆ. ಬೇಡಿಕೆ 2,100 ಎಂಎಲ್‍ಡಿಯಿದೆ. 2030ರ ವೇಳೆಗೆ 3,850 ರಿಂದ 5,340 ಎಂಎಲ್‍ಡಿ ನೀರಿನ ಅಗತ್ಯಬರಬಹುದು ಎಂದು ಹೇಳಲಾಗುತ್ತಿದೆ. ಸದ್ಯ ಅಂತರ್ಜಲದ ಮೂಲಕ 1,000 ಎಂಎಲ್‍ಡಿ ನೀರು ಲಭ್ಯವಾಗುತ್ತದೆ. ಇನ್ನುಳಿದಂತೆ ಟ್ಯಾಂಕರ್ ನೀರಿನ ಮೇಲೆ ಬಹುತೇಕರು ಅವಲಂಬಿತವಾಗಿದ್ದಾರೆ ಎಂದು ಹುಸೇನ್ ತಿಳಿಸಿದರು.
ನೆಲಮಂಗಲ, ಮಹದೇವಪುರದಂತಹ ಪ್ರದೇಶಗಳಲ್ಲಿ ಬಡ ಕುಟುಂಬಗಳು ನೀರಿಗಾಗಿ ಪ್ರತಿ ತಿಂಗಳು ಸರಿ ಸುಮಾರು 4-5 ಸಾವಿರ ರೂ. ಗಳನ್ನು ಖರ್ಚು ಮಾಡಬೇಕಾದ ಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಮ್ಮ ಜಲ ಸತ್ಯಾಗ್ರಹ ಚಳವಳಿಯ ಮೂಲಕ ಸಮೀಕ್ಷೆಯನ್ನು ಆರಂಭಿಸಿದ್ದೇವೆ. ಇದರಲ್ಲಿ ಒಂದು ಕುಟುಂಬ ವಾರ್ಷಿಕವಾಗಿ ನೀರಿಗಾಗಿ ಎಷ್ಟು ಖರ್ಚು ಮಾಡುತ್ತದೆ? ಅವರಿಗೆ ಲಭ್ಯವಿರುವ ನೀರಿನ ಮೂಲ ಯಾವುದು? ಕುಡಿಯುವ ಉದ್ದೇಶಕ್ಕಾಗಿ ಯಾವ ರೀತಿಯ ನೀರನ್ನು ಬಳಕೆ ಮಾಡುತ್ತಿದ್ದಾರೆ, ಒಂದು ದಿನಕ್ಕೆ ಎಷ್ಟು ಪ್ರಮಾಣದಲ್ಲಿ ನೀರು ಬಳಕೆ ಮಾಡುತ್ತಾರೆ ಎಂಬುದು ಸೇರಿದಂತೆ ಇನ್ನಿತರ ಮಾಹಿತಿಯನ್ನು ಆನ್‍ಲೈನ್ ಹಾಗೂ ಆಫ್‍ಲೈನ್ ಮೂಲಕ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಜನಜಾಗೃತಿ :
1927ರ ಮಾ.20ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ‘ನಮ್ಮ ಹೋರಾಟ ನೀರಿಗಾಗಿ ಅಲ್ಲ, ಮಾನವ ಹಕ್ಕುಗಳಿಗಾಗಿ’ ಎಂದು ಮಹಾರಾಷ್ಟ್ರದ ಮಹಾಡ್‍ನಲ್ಲಿ ಆರಂಭಿಸಿದ ಸತ್ಯಾಗ್ರಹ, 2027ರ ಮಾ. 20ರಂದು 100 ವರ್ಷಗಳನ್ನು ಪೂರೈಸಲಿದೆ. ಈ ಸಂದರ್ಭದಲ್ಲಿ ನಾವು ನಮ್ಮ ಸಮೀಕ್ಷೆಯ ವರದಿಯನ್ನು ಸರಕಾರಕ್ಕೆ ಸಲ್ಲಿಸಿ ಜನಸಾಮಾನ್ಯರಿಗೆ ‘ಜಲ ಭಾಗ್ಯ’ದ ಬೇಡಿಕೆಯನ್ನಿಡಲು ಉದ್ದೇಶಿಸಿದ್ದೇವೆ ಎಂದು ಹುಸೇನ್ ಹೇಳಿದರು.
ನಮ್ಮ ಹೋರಾಟ :
ಪ್ರತಿಯೊಂದು ಮನೆಗೂ ಶುದ್ಧ ಹಾಗೂ ಕೈಗಟಕುವ ದರಲ್ಲಿ ನೀರು ಲಭ್ಯವಾಗಬೇಕು, ಜಲಸಂಕಷ್ಟ ನಿರ್ವಹಣೆಗೆ ತಾತ್ಕಾಲಿಕ ಕ್ರಮಗಳ ಬದಲು ಸಮಗ್ರ ಯೋಜನೆ ರೂಪಿಸಬೇಕು, ಕುಡಿಯುವ ನೀರಿನ ಮೇಲೆ ಹೇರುತ್ತಿರುವ ಅಸಮರ್ಪಕ ತೆರಿಗೆಗಳನ್ನು ನಿಲ್ಲಿಸಬೇಕು, ಕುಡಿಯುವ ನೀರಿನ ಉದ್ದೇಶಕ್ಕಾಗಿ ಆರಂಭಿಸುತ್ತಿರುವ ಮೇಕೆದಾಟು ಅಣೆಕಟ್ಟು ಮಾದರಿಯ ಯೋಜನೆಗಳಿಗೆ ಅನುಮತಿ ನೀಡಬೇಕು ಎಂಬುದು ನಮ್ಮ ಹೋರಾಟ ಎಂದು ಹುಸೇನ್ ಹೇಳಿದರು.






