ವಿಧಾನಸಭೆಯಲ್ಲಿ ʼಬಳ್ಳಾರಿ ಗಲಾಟೆʼ ವಿಚಾರ ಸದ್ದು | ಜನಾರ್ದನ ರೆಡ್ಡಿ-ಬಿ.ನಾಗೇಂದ್ರ ಸವಾಲು-ಪ್ರತಿಸವಾಲು

ಬೆಂಗಳೂರು : ಬಳ್ಳಾರಿ ಗಲಾಟೆ ವಿಚಾರ ವಿಧಾನಸಭೆಯಲ್ಲಿ ಮತ್ತೆ ಸದ್ದು ಮಾಡಿದ್ದು, ಕಾಂಗ್ರೆಸ್ ಸದಸ್ಯ ಬಿ.ನಾಗೇಂದ್ರ ಹಾಗೂ ಜನಾರ್ದನ ರೆಡ್ಡಿ ಮಧ್ಯೆ ಸವಾಲು ಪ್ರತಿಸವಾಲು ಕಂಡುಬಂತು.
ಶುಕ್ರವಾರ ರಾಜ್ಯಪಾಲರ ಭಾಷಣ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ವಿಷಯ ಪ್ರಸ್ತಾಪಿಸಿದ ಬಿ.ನಾಗೇಂದ್ರ, ಜನಾರ್ದನ ರೆಡ್ಡಿ ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಬ್ಯಾನರ್ ಹಾಕಿದ್ದು ತಪ್ಪು ಎಂದು ಸಿಎಂ ಹೇಳಿದ್ದಾರೆ ಎಂದಿದ್ದಾರೆ. ಆದರೆ ಸಿಎಂ ಆ ರೀತಿಯಾಗಿ ಹೇಳಿಲ್ಲ ಎಂದು ಉಲ್ಲೇಖಿಸಿದರು.
ವಾಲ್ಮೀಕಿ ಬ್ಯಾನರ್ ತೆಗೆದುಹಾಕಿ ಬಿಜೆಪಿ ಪರ ಘೋಷಣೆ ಕೂಗಿದ್ದಾರೆ. ಗಲಾಟೆ ತಡೆಯಲು ಪೊಲೀಸರು ಕೆಲಸ ಮಾಡಿದ್ದಾರೆ. ಗಲಾಟೆ ಆದ ಸಮಯದಲ್ಲಿ ನೋಡಲು ಹೆಚ್ಚು ಜನರು ಬಂದಿರುತ್ತಾರೆ. ಘಟನೆ ಬಳಿಕ ಗೃಹ ಮಂತ್ರಿಗಳು ತೀವ್ರ ರೀತಿಯಲ್ಲಿ ಗಮನ ಹರಿಸಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿದೆ. ಬಿಜೆಪಿಯವರು ಪ್ರತಿಭಟನೆ ಮಾಡಿದರೂ ಯಾರೂ ತೊಂದರೆ ಮಾಡಲಿಲ್ಲ. ನಾವು ತಕರಾರು ಎತ್ತಲಿಲ್ಲ. ಆದರೆ ಭಾಷಣದಲ್ಲಿ ಮಾಜಿ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರನ್ನು ಹುಡುಕಾಡಿ ಹೊಡೆಯುತ್ತೇವೆ ಎಂದೆಲ್ಲಾ ಭಾಷಣದಲ್ಲಿ ಹೇಳಿದ್ದಾರೆ. ಹೀಗೆ, ಹೇಳುವ ಮೂಲಕ ಮತ್ತೆ ರಿಪಬ್ಲಿಕ್ ಬಳ್ಳಾರಿ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದರು.
ಈ ವೇಳೆ ಬಳ್ಳಾರಿ ಘರ್ಷಣೆ ಬಗ್ಗೆ ಸದ್ದುಗದ್ದಲ ಉಂಟಾಯಿತು. ಬಳಿಕ ಜನಾರ್ದನ ರೆಡ್ಡಿ, ಭರತ್ ರೆಡ್ಡಿ ಬಂಧನ ಮಾಡದಿದ್ದರೆ ಪಾತಾಳದಲ್ಲಿದ್ದರೂ ಹುಡುಕಿ ತರುತ್ತೇವೆ ಎಂದಿದ್ದೇವೆ. ರಿಪಬ್ಲಿಕ್ ಆಫ್ ಬಳ್ಳಾರಿ ಪದ ಪ್ರಯೋಗ ಬೇಡ. ಶ್ರೀರಾಮುಲು ಯಾವ ಎಚ್ಚರಿಕೆಯನ್ನೂ ಕೊಟ್ಟಿಲ್ಲ. ಪೆಟ್ರೋಲ್ ಬಾಂಬ್ ಹಾಕಲು ಮುಂದಾದರು. ನಿಮ್ಮ ಕಾರ್ಯಕರ್ತ ಸಾವನ್ನಪ್ಪಿದ್ದಾರೆ. ಆದರೆ ನೀನು ಅದನ್ನೇ ಸಮರ್ಥನೆ ಮಾಡಿಕೊಳ್ಳುತ್ತಿಯಾ ಎಂದರೆ ಹೇಗೆ? ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಗದ್ದಲ ಉಂಟಾಯಿತು. ಸಚಿವ ಕೃಷ್ಣ ಭೈರೇಗೌಡ, ಶಿವಲಿಂಗೇಗೌಡ ಸೇರಿ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಜನಾರ್ದನ ರೆಡ್ಡಿ ಸವಾಲ್ ಸ್ವೀಕರಿಸಿದ ನಾಗೇಂದ್ರ, ವಾಲ್ಮೀಕಿ ಸಮಾಜ ನಮ್ಮ ಸಮಾಜ. ನಮ್ಮ ಸಮಾಜದ ಜನ ನಮ್ಮ ಜೊತೆಗೆ ಇದ್ದಾರೆ. ವಾಲ್ಮೀಕಿ ಭಾವಚಿತ್ರ ಇರುವ ಬ್ಯಾನರ್ ಕೆಳಗೆ ಹಾಕಿ ತುಳಿದಿದ್ದಾರೆ. ಇದು ಸರಿಯಲ್ಲ ಎಂದರು.







