ಅಧಿವೇಶನ | ಮೇಕೆದಾಟು ಅಣೆಕಟ್ಟು ಯೋಜನೆಗೆ ಅನುಮತಿ ಕೊಡಿ : ಜಯಚಂದ್ರ ಮನವಿ

ಬೆಂಗಳೂರು : ‘2050ರ ವೇಳೆಗೆ ಬೆಂಗಳೂರಿನ ಜನಸಂಖ್ಯೆ 3 ಕೋಟಿ ತಲುಪಲಿದ್ದು, ಕುಡಿಯುವ ನೀರಿಗೆ ಅಭಾವ ಉಂಟಾಗುವ ಸಾಧ್ಯತೆಗಳಿವೆ. ಹೀಗಾಗಿ ನೆನೆಗುದ್ದಿಗೆ ಬಿದ್ದಿರುವ ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಸರಕಾರ ಅನುಮತಿ ನೀಡಬೇಕು’ ಎಂದು ರಾಜ್ಯ ಸರಕಾರದ ಹೊಸದಿಲ್ಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಆಗ್ರಹಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ಬೆಂಬಲಿಸಿ ಮಾತನಾಡಿದ ಅವರು, ಬೆಂಗಳೂರಿನ ಸೇರಿದಂತೆ ಸುತ್ತಮುತ್ತಲಿನ 5 ಜಿಲ್ಲೆಗಳಲ್ಲಿ ಅಂತರ್ಜಲವನ್ನು ಮಿತಿಮೀರಿ ಬಳಸಲಾಗಿದ್ದು, ಜನಸಂಖ್ಯೆಗೆ ತಕ್ಕಂತೆ ಕುಡಿಯುವ ನೀರು ಒದಗಿಸಲು ಸಂಕಷ್ಟ ಎದುರಾಗಲಿದೆ. ಹೀಗಾಗಿ ಮೇಕೆದಾಟು ಯೋಜನೆ ಅನುಷ್ಠಾಗೊಂಡರೆ 67ಟಿಎಂಸಿ ನೀರು ಸಿಗಲಿದ್ದು, ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸಲು ಸಹಕಾರಿ ಎಂದರು.
ಅದೇ ರೀತಿ ಹಿಂದುಳಿದ ಪ್ರದೇಶಗಳಾದ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಾಗಿ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಆದರೆ, ಕೇಂದ್ರ ಸರಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿ ತನ್ನ ಪಾಲಿನ 5,300 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು.
ರಾಜ್ಯದ ಆರ್ಥಿಕ ಶಕ್ತಿಯನ್ನು ಒಂದು ಟ್ರಿಲಿಯನ್ ಡಾಲರ್‌ಗೆ ಏರಿಸಬೇಕು. ಮಹಾರಾಷ್ಟ್ರ ರಾಜ್ಯದ ನಂತರ ಅತಿಹೆಚ್ಚು ತೆರಿಗೆ ಸಂಗ್ರಹಿಸುತ್ತಿರುವ ರಾಜ್ಯ ಕರ್ನಾಟಕ. ಇತ್ತೀಚೆಗೆ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯ ಹೊಸ ದಾಖಲೆ ನಿರ್ಮಿಸಿದ್ದು 10.7ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಐಟಿ-ಬಿಟಿ, ಔಷಧಿ ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆ ಮಾಡಿದೆ ಎಂದು ಹೇಳಿದರು.
ಹುಣಿಸೆ ಪಾರ್ಕ್: ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಕಡಿಮೆ ಮಳೆ ಬೀಳುತ್ತಿದ್ದು, ಹುಣಸೆಹಣ್ಣು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಹುಣಸೆಹಣ್ಣಿನಲ್ಲಿ ಔಷಧಿ ಅಂಶಗಳಿದ್ದು ದೇಶ-ವಿದೇಶಗಳಲ್ಲಿ ಬೇಡಿಕೆ ಇದೆ. ದಕ್ಷಿಣ ಆಫ್ರಿಕಾದ ನಂತರ ಹೆಚ್ಚು ಹುಣಿಸೆ ಬೆಳೆಯುವುದು ರಾಜ್ಯದಲ್ಲಿ. ಹೀಗಾಗಿ ಕರ್ನಾಟದಲ್ಲಿ ‘ಹುಣಿಸೆ ಹಣ್ಣಿನ ಪಾರ್ಕ್’ ಅನ್ನು ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದರು.
ಈಗಾಗಲೇ ಹುಣಸೆ ಪಾರ್ಕ್ ನಿರ್ಮಾಣಕ್ಕಾಗಿ 20ಎಕರೆ ಭೂಮಿಯನ್ನು ತುಮಕೂರು ಜಿಲ್ಲೆಯಲ್ಲಿ ಗುರುತಿಸಲಾಗಿದೆ ಎಂದ ಅವರು, ಶಿರಾ ತಾಲೂಕಿನಲ್ಲಿ ಪ್ರಸಕ್ತ 32ಸಾವಿರ ಎಕರೆಯಲ್ಲಿ ಬಿಟಿ ಹತ್ತಿಯನ್ನ ಬೆಳೆಯಲಾಗುತ್ತಿದೆ. ಆ ಭಾಗದ ಜನರಿಗೆ ಇದು ಪ್ರಮುಖ ವಾಣಿಜ್ಯ ಬೆಳೆ ಆಗಿದೆ. ಮುಂದಿನ ದಿನಗಳಲ್ಲಿ ಮೆಣಸಿನಕಾಯಿ ಹಾಗೂ ಹತ್ತಿ ಬೆಳೆಯಲು ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಕೋರಿದರು.







