ಅಭಿಮಾನವಿದ್ದರೆ ನಿಮ್ಮ ಮನೆಗೆ ‘ಮನಮೋಹನ್ ಸಿಂಗ್ ಹೆಸರಿಡಿ’: ಜೆಡಿಎಸ್

ಬೆಂಗಳೂರು : ‘ಮುಖ್ಯಮಂತ್ರಿ ಸಿದ್ದರಾಮಯ್ಯರೇ ನಿಮಗೆ ಅಷ್ಟು ಅಭಿಮಾನ ಇದ್ದರೆ ಮೈಸೂರಿನಲ್ಲಿ ನಿರ್ಮಿಸುತ್ತಿರುವ ನಿಮ್ಮ ಹೊಸ ಮನೆಗೆ ‘ಮನಮೋಹನ್ ಸಿಂಗ್ ನಿವಾಸ’ ಎಂದು ಹೆಸರಿಟ್ಟು ಕೊಳ್ಳಿ. ನಿಮ್ಮ ಸೊಸೆಯ ಒಡೆತನದಲ್ಲಿರುವ ಬಹುಕೋಟಿ ರೂ.ಮೌಲ್ಯದ ಐಶಾರಾಮಿ ಕ್ಲಬ್‍ಗೆ ಮರು ನಾಮಕರಣ ಮಾಡಿಕೊಳ್ಳಿ’ ಎಂದು ಜೆಡಿಎಸ್ ಲೇವಡಿ ಮಾಡಿದೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಜೆಡಿಎಸ್, ಸಿಎಂ ಸಿದ್ದರಾಮಯ್ಯ ಅವರೇ ಬೆಂಗಳೂರು ವಿವಿ ನಿಮ್ಮ ಮನೆತನದ ಆಸ್ತಿಯಲ್ಲ. ಕಾಂಗ್ರೆಸ್ ಪಕ್ಷದ ಆಸ್ತಿಯೂ ಅಲ್ಲ. ‘ಬೆಂಗಳೂರು’ ಎಂಬುದು ಈ ನೆಲಮೂಲದ ಹೆಗ್ಗುರುತು. ಸಮಸ್ತ ಕನ್ನಡಿಗರ ಹೆಮ್ಮೆ. ಹಾಗೂ ಕನ್ನಡಿಗರ ಪ್ರತಿಧ್ವನಿ. ಬೆಂಗಳೂರು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ನಗರ. ಬೆಂಗಳೂರು ಎಂಬುದೇ ಒಂದು ವಿಶ್ವ ಪ್ರಸಿದ್ಧ ಬ್ರ್ಯಾಂಡ್. ಅದೇ ಬೆಂಗಳೂರು ಹೆಸರಿಗೆ ಇರುವ ಶಕ್ತಿ. ನಮಗೆ ಡಾ.ಮನಮೋಹನ್ ಸಿಂಗ್ ಮೇಲೆ ಅಪಾರವಾದ ಗೌರವವಿದೆ. ಆದರೆ ಬೆಂಗಳೂರು ನಗರ ವಿವಿಗೆ ಪರ್ಯಾಯವಾಗಿ ಬೇರೆ ಯಾವುದೇ ಹೆಸರಿಡಲು ತೀವ್ರ ವಿರೋಧವಿದೆ. ಈ ವಿಚಾರದಲ್ಲಿ ರಾಜ್ಯದ ಜನತೆಯೂ ಸರಕಾರದ ಈ ನಿರ್ಧಾರವನ್ನು ಒಪ್ಪುವುದಿಲ್ಲ ಎಂದು ಆಕ್ಷೇಪಿಸಿದೆ.
‘ಕನ್ನಡ ಭಾಷೆ, ನೆಲ, ಜಲಕ್ಕಾಗಿ ಹೋರಾಡಿದ ಸಾವಿರಾರು ಕನ್ನಡಿಗ ಸಾಧಕರು ಇದ್ದಾರೆ. ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಕರ್ನಾಟಕಕ್ಕೆ ಕೀರ್ತಿ ತಂದ ಮಹನೀಯರಿದ್ದಾರೆ. ಆ ಕನ್ನಡಿಗರು ಕಾಂಗ್ರೆಸ್ಸಿಗರ ಕಣ್ಣಿಗೆ ಬೀಳಲಿಲ್ಲವೇ?. ಹೊಸದಿಲ್ಲಿಯಲ್ಲಿ ಹೊಸದಾಗಿ ನಿರ್ಮಿಸಿದ ಕಾಂಗ್ರೆಸ್ ಕಚೇರಿಗೆ ‘ಇಂದಿರಾ ಭವನ’ ಎಂದು ಹೆಸರಿಟ್ಟಿರಿ.
ಅದಕ್ಕೆ ಸಿಂಗ್ ಹೆಸರಿಡಲು ಇಟಲಿ ಕಾಂಗ್ರೆಸ್‍ನ ಆಪ್ತರ ಗುಂಪು ಒಪ್ಪಲಿಲ್ಲ ಎಂಬುದು ತಮಗೆ ತಿಳಿದಿರುವ ವಿಷಯ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಆಡಳಿತ ವಿರುವ ಕಾರಣ ‘ಗುಲಾಮಿ ಕಾಂಗ್ರೆಸ್’ ನಾಯಕರು, ಬೆಂಗಳೂರಿನಲ್ಲಿ ಬೇಳೆ ಬೇಯಿಸಿಕೊಳ್ಳುತ್ತೀರಿ. ಕೆಲ ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ಕಂಚಿನ ಪ್ರತಿಮೆ ಅನಾವರಣಗೊಳಿಸಲಾಗಿತ್ತು. ಈಗ ಬೆಂಗಳೂರು ವಿವಿಗೆ ಸಿಂಗ್ ಹೆಸರು ನಾಮಕರಣ ಮಾಡುವುದಾಗಿ ಘೋಷಿಸಿದ್ದೀರಿ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
ಉರ್ದುರಾಮಯ್ಯ: ‘ಕನ್ನಡಕ್ಕೆ ಪ್ರಥಮ ಆದ್ಯತೆ, ಕನ್ನಡವೇ ಆಡಳಿತ ಭಾಷೆ ಎಂದು ಪುಂಗಿ ಬಿಡುತ್ತಲೇ ಸಿದ್ದರಾಮಯ್ಯ ರಾಜ್ಯದಲ್ಲಿ 100 ಉರ್ದು ಶಾಲೆಗಳನ್ನು ಪಬ್ಲಿಕ್ ಶಾಲೆ ಮಾದರಿಯಲ್ಲಿ ಹೈಟೆಕ್ ಮಾಡುತ್ತಿದ್ದಾರೆ. ಕನ್ನಡವೇ ಗೊತ್ತಿಲ್ಲದ, ಕನ್ನಡ ಓದಲು, ಬರೆಯಲು ಬಾರದ, ಕೇವಲ ಉರ್ದು ಭಾಷೆಯಲ್ಲಿ ಶಿಕ್ಷಣ ಪಡೆದರೇ ಕನ್ನಡದಲ್ಲಿ ಆಡಳಿತ ನಡೆಸಲು ಸಾಧ್ಯವಾಗುತ್ತದೆಯೇ? ಇದರಿಂದ ಕನ್ನಡ ಭಾಷೆ ಉಳಿಯುತ್ತದೆಯೇ?’ ಎಂದು ಜೆಡಿಎಸ್ ಪ್ರಶ್ನಿಸಿದೆ.
‘ಮತಬ್ಯಾಂಕ್‍ಗಾಗಿ ಒಂದು ಸಮುದಾಯವನ್ನು ಅತಿಯಾಗಿ ಓಲೈಕೆ ಮಾಡುತ್ತಿರುವ ಸಿದ್ದರಾಮಯ್ಯ ‘ಉರ್ದುರಾಮಯ್ಯ’ ಆಗಿ ಬದಲಾಗಿದ್ದಾರೆ. ಸಾವಿರಾರು ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಸಾವಿರಾರು ಸರಕಾರಿ ಶಾಲೆಗಳನ್ನು ದುರಸ್ತಿಮಾಡಲು ಸರಕಾರದ ಬಳಿ ದುಡ್ಡಿಲ್ಲದೇ, ಮರಗಳ ನೆರಳಿನಲ್ಲಿ ವಿದ್ಯಾರ್ಥಿಗಳು ಓದುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ವೇಳೆ ಬಜೆಟ್‍ನಲ್ಲಿ 100 ಹೈಟೆಕ್ ಉರ್ದುಶಾಲೆಯ ಘೋಷಣೆ ಕನ್ನಡಕ್ಕೆ ಹಾಗೂ ಕನ್ನಡ ಭಾಷಿಕರ ಮೇಲೆ ಮಾಡುತ್ತಿರುವ ಗಧಾ ಪ್ರಹಾರ ಎಂಬುದರಲ್ಲಿ ಸಂದೇಹವೇ ಇಲ್ಲ ಎಂದು ಜೆಡಿಎಸ್ ಲೇವಡಿ ಮಾಡಿದೆ.







