ಜಿಗ್ನೇಶ್ ಮೆವಾನಿ ಕುರಿತು ಅವಹೇಳನ ಪ್ರಕರಣ; ಬಿಜೆಪಿ ನಾಯಕನ ವಿರುದ್ಧ ಬೆಂಗಳೂರಿನಲ್ಲಿಯೂ ದೂರು

ಜಿಗ್ನೇಶ್ ಮೇವಾನಿ
ಬೆಂಗಳೂರು : ಗುಜರಾತ್ನ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೆವಾನಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಆಗಿ ನಿಂದನೆ ಮಾಡಿರುವ ಆರೋಪದಡಿ ಬಿಜೆಪಿ ನಾಯಕ ಧವನ್ ದೇವ್ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಎಸ್ಸಿ ವಿಭಾಗದ ಅಧ್ಯಕ್ಷ ಆರ್.ಧರ್ಮಸೇನ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಬುಧವಾರ ಈ ಕುರಿತು ಮಾಹಿತಿ ನೀಡಿದ ಧರ್ಮಸೇನ, ಗುಜರಾತ್ನ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೆವಾನಿ ಅವರನ್ನು ಗುರಿಯಾಗಿಸಿಕೊಂಡು ಸಾಮಾಜಿಕಜಾಲತಾಣಗಳಲ್ಲಿ ಗುಜರಾತಿನ ಬಿಜೆಪಿ ಉಸ್ತುವಾರಿ ಆಗಿರುವ ಧವನ್ ದೇವ್ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಬರಹ ಪ್ರಕಟಿಸಿದ್ದಾರೆ. ಈ ಬಗ್ಗೆ ಸ್ವತಃ ಜಿಗ್ನೇಶ್ ಮೆವಾನಿ ದೂರು ನೀಡಲು ಹೋದರೆ ಗುಜರಾತ್ನ ಪೊಲೀಸರು ದೂರನ್ನೇ ಸ್ವೀಕರಿಸಲಿಲ್ಲ ಎಂದು ತಿಳಿಸಿದರು.
ಶಾಸಕರ ಕುರಿತ ಅವಹೇಳನಕಾರಿ ಪೋಸ್ಟ್ ಡಿಲೀಟ್ ಮಾಡಿಸುವ ಬದಲು, ಅದನ್ನು ಬಿಜೆಪಿಗರು ಉದ್ದೇಶ ಪೂರಕವಾಗಿ ಪ್ರಚಾರ ಮಾಡುತ್ತಿದ್ದಾರೆ. ಜಿಗ್ನೇಶ್ ಅವರು ರಾಷ್ಟ್ರದಲ್ಲಿ ನಾಯಕನಾಗಿ ಗುರುತಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಅವರು ಬೆಳವಣಿಗೆ ತಡೆಯಲು ಈ ಹುನ್ನಾರ ಮಾಡಿದ್ದಾರೆ. ಆದರೆ, ಅಲ್ಲಿನ ರಾಜ್ಯ ಸರಕಾರ ಕೂಡಲೇ ಧವನ್ ದೇವ್ನನ್ನು ಬಂಧಿಸಿ, ಗಡಿಪಾರು ಮಾಡಬೇಕು ಎಂದು ಅವರು ಒತ್ತಾಯಿಸಿದರು.




